ಲಕ್ಷಾಂತರ ರೂ ಸಾಲ ಮಾಡಿ ಅಂಕೋಲಾದ ಸರಸ್ವತಿ ಬಾನಾವಳಿಕರ್ ಅವರುಪಡೆದಿದ್ದ ದೋಣಿ ಸಮುದ್ರದಲ್ಲಿ ಮುಳುಗಿದೆ. ಅಲೆಗಳ ಅಬ್ಬರಕ್ಕೆ ದೋಣಿಯ ಯಂತ್ರೋಪಕರಣಗಳು ನೆನೆದು ಹಾಳಾಗಿವೆ.
ಅಂಕೋಲಾದ ಬೇಲಿಕೇರಿ ಬಂದರಿನಲ್ಲಿ `ಶ್ರೀ ಶಾರದಾಂಬಾ’ ಹೆಸರಿನ ದೋಣಿ ಲಂಗರು ಹಾಕಿತ್ತು. ಗುರುವಾರ ಅಬ್ಬರಿಸಿದ ಅರಬ್ಬಿ ಸಮುದ್ರದ ಅಲೆಗಳು ಆ ದೋಣಿಯನ್ನು ಬುಡಮೇಲು ಮಾಡಿತು. ಪರಿಣಾಮ ದೋಣಿಯ ಒಳಗಿದ್ದ ಬಲೆ ಹಾಗೂ ಇನ್ನಿತರ ಸಾಮಗ್ರಿಗಳು ನೀರುಪಾಲಾದವು.
ಬುಧವಾರ ರಾತ್ರಿಯಿಂದ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಗುರುವಾರ ನಸುಕಿನಲ್ಲಿ ದೋಣಿ ಮುಗುಚಿ ಬಿದ್ದಿತು. ವಿಷಯ ಅರಿತು ಪೊಲೀಸ್, ಕರಾವಳಿ ಕಾವಲುಪಡೆ ಹಾಗೂ ಮೀನುಗಾರಿಕಾ ಸಿಬ್ಬಂದಿ ಕ್ರೇನ್ ಮೂಲಕ ದೋಣಿ ಮೇಲೆತ್ತುವ ಪ್ರಯತ್ನ ಮಾಡಿದರು.
ಬೇಲಿಕೇರಿ ಬಂದರಿನಲ್ಲಿ ಸರಿಯಾಗಿ ತಡೆಗೋಡೆ ಇಲ್ಲದಿರುವುದು ಅಲೆಗಳ ಅಬ್ಬರಕ್ಕೆ ಕಾರಣ ಎಂದು ಜನ ಹೇಳಿದರು. ಶಾಸಕರು-ಸಚಿವರಿಗೆ ಹೇಳಿದರೂ ಅಲೆಗಳನ್ನು ತಡೆಯುವ ತಡೆಗೋಡೆ ನಿರ್ಮಿಸಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ತಡೆಗೋಡೆ ನಿರ್ಮಿಸದೇ ಇದ್ದರೆ ಪ್ರತಿಭಟಿಸುವುದಾಗಿಯೂ ಎಚ್ಚರಿಸಿದರು.