ಶುಕ್ರವಾರ ಸಂಜೆ ದಾಂಡೇಲಿಯಲ್ಲಿ ಸ್ಕೂಟಿ ಸವಾರನೊಬ್ಬ ಎಮ್ಮೆಗೆ ಗುದ್ದಿದ್ದು, ಎಮ್ಮೆ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ, ಆ ಅಪಘಾತದಲ್ಲಿ ಸ್ಕೂಟಿ ಸವಾರ ಬದುಕಲಿಲ್ಲ.
ಭಾಷಾ ಸಾಬ್ ಸನದಿ (50) ಅವರು ಶುಕ್ರವಾರ ಸಂಜೆ ಸ್ಕೂಟಿ ಸವಾರಿ ನಡೆಸಿದ್ದರು. ದಾಂಡೇಲಿಯಿoದ ಹೊರಟ ಅವರು ಕುಳಗಿಗೆ ಹೋಗುವವರಿದ್ದರು. ಆದರೆ, ಕುಳಗಿ ತಲಪುವ ಮುನ್ನವೇ ಅವರ ಸ್ಕೂಟಿ ಅಪಘಾತಕ್ಕೀಡಾಯಿತು.
ಈ ಮಾರ್ಗದ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಾನುವಾರುಗಳ ಓಡಾಟವಿದ್ದರೂ, ಅದನ್ನು ಲೆಕ್ಕಿಸದೇ ಭಾಷಾ ಸಾಬ್ ಸನದಿ ಅವರು ಸ್ಕೂಟಿ ಓಡಿಸುತ್ತಿದ್ದರು. ಕುಳಗಿ ಸಮೀಪದಲ್ಲಿರುವಾಗಲೇ ಸ್ಕೂಟಿಯ ವೇಗವೂ ಜೋರಾಗಿದ್ದು ರಸ್ತೆಯಲ್ಲಿದ್ದ ಎಮ್ಮೆಗೆ ಆ ಸ್ಕೂಟಿ ಗುದ್ದಿತು. ಗುದ್ದಿದ ರಭಸಕ್ಕೆ ಸ್ಕೂಟಿ ಜೊತೆ ಭಾಷಾ ಸಾಬ್ ಸನದಿ ಅವರು ಬಿದ್ದು ಪೆಟ್ಟು ಮಾಡಿಕೊಂಡರು. ಅಲ್ಲಿಯೇ ಸಾವನಪ್ಪಿದರು.
ಭಾಷಾ ಸಾಬ್ ಸನದಿ ಅವರು ಕುಳಗಿ ಗ್ರಾಮದವರಾಗಿದ್ದರು. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.