ನಡುರಾತ್ರಿ ನಡೆದ ಕಾರು ಅಪಘಾತದಲ್ಲಿ ಸಿದ್ದಾಪುರದ ಜಾನ್ ಡಯಾಸ್ ಅವರ ಕಾಲು ಮುರಿದಿದ್ದು, ಆ ಕಾರು ಓಡಿಸುತ್ತಿದ್ದ ಹಣಜಿಬೈಲಿನ ಗಣೇಶ ಮಡಿವಾಳ ಅವರು ಅಪಘಾತದ ನಂತರ ಜಾನ್ ಡಯಾಸ್ ಅವರನ್ನು ಕಾರಿನಲ್ಲಿಯೆ ಕೂರಿಸಿ ಪರಾರಿಯಾಗಿದ್ದಾರೆ. ಕಾಲು ಮುರಿದ ವ್ಯಕ್ತಿಯನ್ನು ಮದ್ಯರಾತ್ರಿ ಕಾರಿನಲ್ಲಿ ಕೂರಿಸಿ ಓಡಿಹೋದ ಗಣೇಶ ಮಡಿವಾಳ ಅವರ ವಿರುದ್ಧ ಜಾನ್ ಡಯಾಸ್ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಿದ್ದಾಪುರದ ಹಣಜಿಬೈಲಿನ ಗಣೇಶ ವೆಂಕಟೇಶ ಮಡಿವಾಳ ಅವರ ಅಣ್ಣ ಸುರೇಶ ಮಡಿವಾಳ ಅವರು ಅಕ್ಟೊಬರ್ 19ರಂದು ಊರಿಗೆ ಬರುವವರಿದ್ದರು. ಹೀಗಾಗಿ ಅವರನ್ನು ತಾಳಗುಪ್ಪಾ ರೈಲು ನಿಲ್ದಾಣದಿಂದ ಕರೆತರಲು ಗಣೇಶ ಮಡಿವಾಳ ಅವರು ಹೋಗುವವರಿದ್ದರು. ಗಣೇಶ ಮಡಿವಾಳ ಅವರು ಆ ದಿನ ಸಂಜೆ 7ಗಂಟೆಗೆ ತಮ್ಮ ಆಲ್ಟೋ ಕಾರು ಹೊರ ತೆಗೆದಾಗ ಕನಕದಾಸಗಲ್ಲಿಯ ಜಾನ್ ಸಾವರ್ ಡಯಾಸ್ ಅವರು ಎದುರಾದರು.
ಜಾನ್ ಡಯಾಸ್ ಅವರು ಆ ಕಾರು ಹತ್ತಿ ಕುಳಿತರು. ಗಣೇಶ ಮಡಿವಾಳ ಅವರ ಜೊತೆ ಜಾನ್ ಡಯಾಸ್ ಅವರು ತಾಳಗುಪ್ಪಕ್ಕೆ ತೆರಳಿದರು. ಅಲ್ಲಿದ್ದ ಸುರೇಶ ಮಡಿವಾಳ ಅವರನ್ನು ಕಾರಿನೊಳಗೆ ಕೂರಿಸಿಕೊಂಡು ಎಲ್ಲರೂ ಮರಳಿ ಮನೆ ಕಡೆ ಹೊರಟಿದ್ದರು. ಆ ಕಾರು ವೇಗವಾಗಿ ಚಲಿಸುತ್ತಿತ್ತು. ಗಣೇಶ ಮಡಿವಾಳ ಅವರೇ ಕಾರು ಚಲಾಯಿಸುತ್ತಿದ್ದರು. ಗೊಳಗೋಡ ಬಸ್ ನಿಲ್ದಾಣದ ಬಳಿ ರಾತ್ರಿ 10.30ಕ್ಕೆ ಕಾರು ತಲುಪಿದ್ದು, ಗಣೇಶ ಮಡಿವಾಳ ಅವರ ನಿಯಂತ್ರಣ ತಪ್ಪಿದ ಕಾರು ಅಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಯಿತು.
ಗಣೇಶ ಮಡಿವಾಳ ಹಾಗೂ ಸುರೇಶ ಮಡಿವಾಳ ಈ ಅಪಘಾತದಲ್ಲಿ ಅಲ್ಪ ಪ್ರಮಾಣದಲ್ಲಿ ಗಾಯಗೊಂಡರು. ಆದರೆ, ಜಾನ್ ಡಯಾಸ್ ಅವರ ಎಡಗಾಲಿನ ತೊಡೆಯ ಬಳಿ ಮೂಳೆ ಮುರಿದಿತ್ತು. ಜಾನ್ ಡಯಾಸ್ ಅವರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದ್ದರಿಂದ ನಡೆಯಲು ಸಾಧ್ಯವಿರಲಿಲ್ಲ. ಈ ವೇಳೆ ಜನ್ ಡಯಾಸ್ ಅವರನ್ನು ಆಸ್ಪತ್ರೆಗೆ ಸೇರಿಸಬೇಕಿದ್ದ ಗಣೇಶ ಮಡಿವಾಳ ಅವರು ಆ ಕೆಲಸ ಮಾಡಲಿಲ್ಲ. ಕಾರನ್ನು ಅಲ್ಲಿಯೇ ಬಿಟ್ಟು ಗಣೇಶ ಮಡಿವಾಳ ಹಾಗೂ ಸುರೇಶ ಮಡಿವಾಳ ಊರು ಸೇರಿದರು.
ಅದಾದ ನಂತರ ಅವರಿವರ ಸಹಾಯಪಡೆದು ಜಾನ್ ಡಯಾಸ್ ಅವರು ಆಸ್ಪತ್ರೆ ಸೇರಿದರು. ಆಸ್ಪತ್ರೆಗೆ ಬಂದ ಪೊಲೀಸರು ಅಪಘಾತದ ವಿವರಪಡೆದಿದ್ದು, ಗಣೇಶ ಮಡಿವಾಳ ಅವರು ಮಾಡಿದ ಕೆಲಸದ ಬಗ್ಗೆ ಜಾನ್ ಡಯಾಸ್ ಅವರು ಆಕ್ರೋಶದಿಂದ ಹೇಳಿದರು. ಕಾಲಿನ ಮೂಳೆ ಮುರಿದರೂ ಆಸ್ಪತ್ರೆಗೆ ಸೇರಿಸಿದೇ ಕಾರಿನೊಳಗೆ ಬಿಟ್ಟು ಪರಾರಿಯಾದದನ್ನು ವಿವರಿಸಿದರು. ಜಾನ್ ಡಯಾಸ್ ಅವರ ನೋವು ಅರ್ಥಮಾಡಿಕೊಂಡ ಸಿದ್ದಾಪುರ ಪೊಲೀಸರು ಅಪಘಾತಕ್ಕೆ ಕಾರಣರಾದ ಗಣೇಶ ಮಡಿವಾಳ ವಿರುದ್ಧ ಪ್ರಕರಣ ದಾಖಲಿಸಿದರು.