ಯಲ್ಲಾಪುರ ಅಂಕೋಲಾ ಗಡಿಭಾಗದ ಕೆಳಾಸೆ-ಕೈಗಡಿ ಹೊಳೆಯಲ್ಲಿ ಮುಳುಗಿದ್ದ ಸಾಗರ ದೇವಾಡಿಗ ಅವರು ಶವವಾಗಿ ಸಿಕ್ಕಿದ್ದಾರೆ. ಮೂರು ದಿನಗಳ ಹುಡುಕಾಟದ ನಂತರ ಗುರುವಾರ ನದಿ ಆಳದಲ್ಲಿ ಸಾಗರ ದೇವಾಡಿಗ ಅವರ ಶವ ದೊರೆತಿದೆ.
ಯಲ್ಲಾಪುರದ ಸಬಗೇರಿಯ ಸಾಗರ್ ರಾಮಾ ದೇವಾಡಿಗ (23) ಅವರು ಮಂಗಳವಾರ ತಮ್ಮ ಸ್ನೇಹಿತರ ಜೊತೆ ಬೇಡ್ತಿ-ಗಂಗಾವಳಿ ನದಿ ಬಳಿ ಹೋಗಿದ್ದರು. ದಿನೇಶ, ಪುನಿತ್ ಹಾಗೂ ವಿನೋದ ಅವರ ಜೊತೆ ಸೇರಿ ಅವರು ಅಲ್ಲಿ ಪಾರ್ಟಿ ಮಾಡಿದ್ದರು. ಅದಾದ ನಂತರ ನದಿ ಅಂಚಿಗೆ ತೆರಳಿದ ಸಾಗರ ದೇವಾಡಿಗ ಕಾಲು ಜಾರಿ ನೀರಿಗೆ ಬಿದ್ದರು. ಆಪ್ತ ಸ್ನೇಹಿತನ ಹುಟ್ಟುಹಬ್ಬದ ದಿನವೇ ಸಾಗರ ದೇವಾಡಿಗ ಅವರು ನೀರು ಪಾಲಾದರು.
ಅಕ್ಕನ ಮಗ ಸಾಗರ ದೇವಾಡಿಗ ಅವರು ನೀರು ಪಾಲಾದ ಬಗ್ಗೆ ಕಾಳಮ್ಮ ನಗರದ ರವಿ ದೇವಾಡಿಗ ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹುಡುಕಾಟಕ್ಕೆ ಪೊಲೀಸರ ನೆರವು ಯಾಚಿಸಿದ್ದರು. ಮಂಗಳವಾರ ಸಂಜೆ 4.30ರ ಅವಧಿಗೆ ಈ ಅವಘಡ ನಡೆದಿದ್ದು, ಆ ದಿನ ರಾತ್ರಿಯವರೆಗೂ ಹುಡುಕಾಟ ನಡೆಯಿತು. ಮರುದಿನ ಬೆಳಗ್ಗೆಯೂ ಮತ್ತೆ ಶೋಧ ಶುರುವಾಯಿತು. ಆದರೆ, ಸಾಗರ ದೇವಾಡಿಗ ಅವರ ಬಗ್ಗೆ ಯಾವ ಸುಳಿವು ಸಿಕ್ಕಿರಲಿಲ್ಲ. ಗುರುವಾರ ಮತ್ತೆ ಹುಡುಕಾಟ ಮುಂದುವರೆದಿದ್ದು, ಮಧ್ಯಾಹ್ನದ ಅವಧಿಗೆ ನೀರಿನಾಳದಲ್ಲಿ ಶವ ಕಾಣಿಸಿತು. ಆ ಶವವನ್ನು ಮೇಲೆತ್ತಿದಾಗ ಅದು ಸಾಗರ ದೇವಾಡಿಗ ಅವರ ದೇಹ ಎಂಬುದು ಖಚಿತವಾಯಿತು.
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಜೊತೆ ಸ್ಥಳೀಯ ಸಿದ್ದಿ ಸಮುದಾಯದವರು ಸಾಗರ ದೇವಾಡಿಗ ಅವರ ಹುಡುಕಾಟ ನಡೆಸಿದ್ದರು. ಗಣಪ ಸಿದ್ದಿ, ರಾಮಾ ಸಿದ್ದಿ, ವೆಂಕ ಸಿದ್ದಿ ಹಾಗೂ ನಾರಾಯಣ ಸಿದ್ದಿ ಅವರ ತಂಡ ಹಗಲು ರಾತ್ರಿ ಕಾಡು-ಮೇಡು ಅಲೆದಿದ್ದರು. ಸಾಗರ ದೇವಾಡಿಗ ಮುಳುಗಿದ 500ಮೀ ದೂರದಲ್ಲಿ ಸದ್ಯ ಶವ ಸಿಕ್ಕಿದೆ.