ಹೊನ್ನಾವರದಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯ ಮೇಲೆ ಕಣ್ಣು ಹಾಕಿದ ಕಳ್ಳನೊಬ್ಬ ಅವರ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯ ಸರ ಎಗರಸಿ ಪರಾರಿಯಗಿದ್ದು, ಆ ಅಪರಿಚಿತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಅಕ್ಟೊಬರ್ 3ರ ಬೆಳಗ್ಗೆ ಹೊನ್ನಾವರ ಹೇರಂಗಡಿ ಗುಡ್ಡೆಕೇರಿಯ ಮಾದೇವಿ ರಾಮ ನಾಯ್ಕ (67) ಅವರು ತಮ್ಮ ಮನೆಯಾದ ಭಕ್ತಿನಹೊಂಡದ ಕಡೆ ನಡೆದು ಹೋಗುತ್ತಿದ್ದರು. ಬಿಳಿ ಬಣ್ಣದ ಅಂಗಿ-ಕಪ್ಪು ಬಣ್ಣದ ಚಡ್ಡಿ ಧರಿಸಿ ಬಂದ ಕಳ್ಳನೊಬ್ಬ ಅವರ ಕತ್ತಿನಲ್ಲಿದ್ದ 35 ಗ್ರಾಂ ಬಂಗಾರವನ್ನು ದೋಚಿದರು. 2.10 ಲಕ್ಷ ರೂ ಮೌಲ್ಯದ ಮಾಂಗಲ್ಯ ಕಳೆದುಕೊಂಡ ಅವರು ಬೊಬ್ಬೆ ಹಾಕಿದರೂ ಸಹ ಕಳ್ಳನನ್ನು ಹಿಡಿಯಲು ಆಗಲಿಲ್ಲ.
ಕಳ್ಳನ ಚಹರೆ ವಿವರಿಸಿದ ಮಾದೇವಿ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸರಗಳ್ಳನ ಹುಡುಕಾಟ ನಡೆಸಿದ್ದಾರೆ. `ಬೆಲೆ ಬಾಳುವ ಆಭರಣಗಳನ್ನು ಕಳ್ಳರಿಗೆ ಕಾಣುವ ಹಾಗೇ ಪ್ರದರ್ಶಿಸಬೇಡಿ’ ಎಂದು ಮಾದೇವಿ ನಾಯ್ಕ ಅವರಿಗೆ ಪೊಲೀಸರು ತಿಳಿಸಿದರು.