`ಅಲ್ಲಿ ಡಕಾಯಿತರಿದ್ದಾರೆ’ ಎಂದು ಬೆದರಿಸಿ ದಾಂಡೇಲಿ ಅಜ್ಜಿಯ ಆಭರಣ ಅಪಹರಿಸಿದ್ದ ನಿಜವಾದ ಡಕಾಯಿತರ ಚಿತ್ರ ಬಹಿರಂಗವಾಗಿದೆ. ಬೈಕಿನಲ್ಲಿ ಬಂದ ಆಗಂತುಕರು ಅಜ್ಜಿಯ ಒಡವೆ ಕದ್ದು ಪರಾರಿಯಾಗಿದ್ದು, ಸಿಸಿ ಕ್ಯಾಮರಾದಲ್ಲಿ ಅವರ ಚಲನ-ವಲನ ಸೆರೆಯಾಗಿದೆ.
`ದಾಂಡೇಲಿ ಬಾಂಬುನಗರದ ಬಳಿ ಡಕಾಯಿತರು ಚಾಕು ಹಿಡಿದು ನಿಂತಿದ್ದಾರೆ’ ಎಂದು ಇಬ್ಬರು ದಾಂಡೇಲಿಯ ಬಂಗೂರುನಗರದ ಓಲ್ಡ್ ಡಿ ಆರ್ ಟಿ ಬಳಿ ಶಾಂತಾ ಯಲ್ಲಪ್ಪ ಪವಾರ್ ಅವರನ್ನು ಬೆದರಿಸಿದ್ದರು. ಶಾಂತಾ ಪವಾರ್ ಅವರ ಬಳಿಯಿದ್ದ ಒಡವೆಗಳನ್ನು ಜೋಪಾನ ಮಾಡಿ ಕೊಡುವೆ ಎಂದು ತಿಳಿಸಿದ ಆ ಆಗಂತುಕರು ಬೂದಿ ಬಣ್ಣದ ಬಟ್ಟೆಯಲ್ಲಿ ಹಾಕಿದ್ದರು. ಶಾಂತಾ ಪವಾರ್ ಅವರು ಮನೆಗೆ ಬಂದು ನೋಡಿದಾಗ ಆ ಬಟ್ಟೆಯಲ್ಲಿ ಎರಡು ಕಲ್ಲುಗಳು ಮಾತ್ರ ಇದ್ದವು.
ಆ ಅಪರಿಚಿತರು ಶಾಂತಾ ಪವಾರ್ ಅವರ ಬಳಿಯಿದ್ದ ಚಿನ್ನದ ಸರ ಹಾಗೂ ಬಳೆ ಅಪಹರಿಸಿದ್ದರು. ಚಾಕು ಹಿಡಿದಿದ್ದ ಡಕಾಯಿತರಿಂದ ಚಿನ್ನ ರಕ್ಷಿಸಿಕೊಳ್ಳುವ ಆತುರಕ್ಕೆ ಬಿದ್ದ 85ರ ವೃದ್ಧೆ ಶಾಂತಾ ಪವಾರ್ ಅವರು ತಮ್ಮ ಮೈಮೇಲಿದ್ದ 2 ಲಕ್ಷ ರೂ ಬೆಲೆಯ ಆಭರಣವನ್ನು ಕಳ್ಳರ ಕೈಗೆ ಕೊಟ್ಟು ಮೋಸ ಹೋಗಿದ್ದರು.
ಅಕ್ಟೊಬರ್ 8ರಂದು ಈ ಎಲ್ಲಾ ವಿದ್ಯಮಾನ ನಡೆದಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಶುರು ಮಾಡಿದರು. ಆಗ ಡಕಾಯಿತರ ಹೆಸರಿನಲ್ಲಿ ಬೆದರಿಸಿ ವಂಚನೆ ಮಾಡುವ ಡಕಾಯಿತರ ಮುಖ ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿತು. ಅಜ್ಜಿಯ ಚಿನ್ನ ಕದ್ದು ಕಲ್ಲು ಕೊಟ್ಟ ಅವರ ಹುಡುಕಾಟ ಮುಂದುವರೆದಿದೆ.