ಫೆಬ್ರವರಿ 24ರಿಂದ ಮಾರ್ಚ ಮಾರ್ಚ 4ರವರೆಗೆ ಶಿರಸಿ ಜಾತ್ರೆ ನಡೆಯುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಗೆ ಬಗೆಯ ಪೋಸ್ಟರ್ ಸಿದ್ದಪಡಿಸಿದ ಸೋಶಿಯಲ್ ಮಿಡಿಯಾ ಶೂರರು ಅದನ್ನು ಎಲ್ಲಾ ಕಡೆ ಹಬ್ಬಿಸುತ್ತಿದ್ದಾರೆ. ಹೀಗಾಗಿ `ಜಾತ್ರೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ’ ಎಂದು ಮಾರಿಕಾಂಬಾ ದೇವಾಲಯ ಆಡಳಿತ ಮಂಡಳಿಯವರೇ ಹೇಳಿದರೂ ಜನ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ!
ಶಿರಸಿ ಜಾತ್ರೆ ದಿನಾಂಕ ಘೋಷಣೆಗೆ ಅದರದ್ದೇ ಆದ ರೀತಿ-ನೀತಿಗಳಿವೆ. ಸಾವಿರಾರು ಜನರಿಗೆ ಸಾಕ್ಷಿಯಾಗಿ ಮಾರಿಕಾಂಬಾ ದೇವಿ ಸಮ್ಮುಖದಲ್ಲಿಯೇ ಜಾತ್ರೆ ದಿನಾಂಕ ಘೋಷಣೆಯಾಗುತ್ತದೆ. ಕನಿಷ್ಟ ಮೂರು ತಿಂಗಳ ಮುಂದೆ ಜಾತ್ರೆ ದಿನಾಂಕ ಘೋಷಣೆ ಆಗಲಿದ್ದು, ಅದರೊಂದಿಗೆ ಪೂಜೆ, ಕಾರ್ಯಕ್ರಮ, ವಿವಾಹ ಮಹೋತ್ಸವ, ರಥೋತ್ಸವ, ವಿಸರ್ಜನೆಯಿಂದ ಪುನರ್ ಪ್ರತಿಷ್ಠೆಯವರೆಗೆ ಪ್ರತಿಯೊಂದು ಮುಹೂರ್ತವನ್ನು ನಿಗದಿ ಮಾಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ನಡೆಯುವ ಮೊದಲು ಮೂಲ ದೇವಸ್ಥಾನದ ಅರ್ಚಕರು `ರಾಯಸ ಪತ್ರ’ ಸಿದ್ಧಪಡಿಸುತ್ತಾರೆ.
ಆ ಪತ್ರವನ್ನು ದೇವಿ ಮುಂದಿರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಭಕ್ತರು ಹಾಗೂ ಸಾರ್ವಜನಿಕರ ಮುಂದೆ ತುಂಬಿದ ಸಭೆಯಲ್ಲಿ ಆ ರಾಯಸ ಪತ್ರವನ್ನು ಓದಿದ ನಂತರ ಅಧಿಕೃತವಾಗಿ ಜಾತ್ರೆ ಕೆಲಸಗಳು ಶುರುವಾಗುತ್ತದೆ. ಆದರೆ, ಇದ್ಯಾವುದರ ಬಗ್ಗೆ ಮಾಹಿತಿಯೇ ಇಲ್ಲದ ಸೋಶಿಯಲ್ ಮೀಡಿಯಾ ಶೂರರು ಅವರೇ ಜಾತ್ರೆ ದಿನಾಂಕ ಘೋಷಿಸಿದ್ದಾರೆ. ದೇವಾಲಯದ ಆಡಳಿತ ಮಂಡಳಿಯನ್ನು ಹೊರಗಿಟ್ಟು ಸೋಶಿಯಲ್ ಮಿಡಿಯಾದಲ್ಲಿಯೇ ಜಾತ್ರೆ ನಡೆಸುವ ಸಿದ್ಧತೆಯಲ್ಲಿದ್ದಾರೆ!
ವಿವಿಧ ಮಾಧ್ಯಮಗಳಲ್ಲಿಯೂ `ಜಾತ್ರೆ ದಿನಾಂಕ ಘೋಷಣೆ ಆಗಿಲ್ಲ’ ಎಂದು ಆಡಳಿತ ಮಂಡಳಿಯವರು ಸ್ಪಷ್ಠನೆ ನೀಡಿದ್ದಾರೆ. ಆದರೆ, ಅಧಿಕೃತ ಮಾಧ್ಯಮಗಳಲ್ಲಿ ಪ್ರಕಟವಾದ ಸತ್ಯ ಸಂದೇಶಕ್ಕಿAತಲೂ ಸಾಮಾಜಿಕ ಜಾಲತಾಣದಲ್ಲಿನ ಸುಳ್ಳು ಸುದ್ದಿ ವ್ಯಾಪಕ ಪ್ರಮಾಣದಲ್ಲಿ ಹರಿದಾಡುತ್ತಿದೆ. ಸೋಮವಾರ ಸಹ ಸತ್ಯಕ್ಕಿಂತಲೂ ಪ್ರಭಾವಶಾಲಿಯಾಗಿ ಜಾತ್ರೆಯ ಸುಳ್ಳು ಸುದ್ದಿ ಬರುತ್ತಿದೆ. ಫೇಸ್ಬುಕ್, ಇನಸ್ಟಾಗ್ರಾಮ್, ವಾಟ್ಸಪ್ ಸೇರಿ ಹಲವು ಕಡೆ ಇದೀಗ ಶಿರಸಿ ಜಾತ್ರೆಯ ವಿಷಯ ಹರಿದಾಡುತ್ತಿದೆ. ಸುಳ್ಳು ಸುದ್ದಿಯ ಬಗ್ಗೆ ಅರಿಯದ ಜನ ಅದನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಬಳಗದ ಜೊತೆ ಹಂಚಿಕೊಳ್ಳುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಶಿರಸಿ ಜಾತ್ರೆಯ ಪೋಸ್ಟರ್ ಹರಿದಾಡುತ್ತಿದೆ. ಅದರೊಂದಿಗೆ ಮಾರಿಕಾಂಬಾ ದೇವಿ ಭಕ್ತಿಗೀತೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಮೊದಲು ಒಂದೆರಡು ಪೇಜ್’ಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಜಾತ್ರೆ ಪೋಸ್ಟರ್ ಇದೀಗ ಮತ್ತೆ ಹಲವು ಕಡೆ ಹರಿದಾಡುತ್ತಿದೆ. ಶಿರಸಿ ಮಾರಿಕಾಂಬಾ ಆಡಳಿತ ಮಂಡಳಿಯವರೇ ಅಧಿಕೃತವಾಗಿ `ಜಾತ್ರೆ ದಿನಾಂಕ ಘೋಷಣೆ ಆಗಿಲ್ಲ’ ಎಂದು ಹೇಳಿದ್ದಾರೆ. ಆದರೆ, ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೆಯಾದ ಸುಳ್ಳು ಸುದ್ದಿ ಮಾತ್ರ ಡಿಲಿಟ್ ಆಗಿಲ್ಲ!