ಯಲ್ಲಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಿರಂತರ ಕಳ್ಳತನ ಮಾಡುತ್ತಿದ್ದ ಈಶ್ವರ ಸಿದ್ದಿ ಕೊನೆಗೂ ಸಿಕ್ಕಿಬಿದ್ದಿದ್ದು, ಆತನ ಬಳಿಯಿದ್ದ ಲಕ್ಷಾಂತರ ರೂ ಮೌಲ್ಯದ ಒಡವೆಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಯಲ್ಲಾಪುರದ ಹಾಸಣಗಿಯ ಮಡಿವಾಳಕೇರಿಯ ಈಶ್ವರ ಮಂಜುನಾಥ ಸಿದ್ಧಿ ಅವರು ಅನೇಕ ಮನೆಗಳಿಗೆ ಕನ್ನ ಹಾಕಿದ್ದರು. ಊರಿನ ಎಲ್ಲರಿಗೂ ಕಳ್ಳತನ ಮಾಡಿದ ವ್ಯಕ್ತಿಯ ಬಗ್ಗೆ ಅರಿವಿದ್ದರೂ ಕಳ್ಳನನ್ನು ಮಾತ್ರ ಹಿಡಿಯಲು ಸಾಧ್ಯವಾಗಿರಲಿಲ್ಲ. ಪೊಲೀಸರು ಈಶ್ವರ ಸಿದ್ದಿ ಹಿಡಿಯುವ ಪ್ರಯತ್ನ ಮಾಡಿದರೂ ಅದು ಫಲ ಕೊಟ್ಟಿರಲಿಲ್ಲ. ಹೀಗಾಗಿ ಮಂಚಿಕೇರಿ ಹಾಗೂ ಸುತ್ತಲಿನ ಭಾಗದ ಜನ ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದರು. ಕಳ್ಳನನ್ನು ಹಿಡಿಯದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದರು.
ಪ್ರತಿ ಬಾರಿ ಪೊಲೀಸರು ಹಿಡಿಯಲು ಹೋದಾಗಲು ಈಶ್ವರ ಸಿದ್ದಿ ಕಾಡಿನ ಕಡೆ ಓಡುತ್ತಿದ್ದರು. ಇಲ್ಲವೇ ಊರು ಬಿಟ್ಟು ಹೊರಡುತ್ತಿದ್ದರು. ನಾನಾ ತಂತ್ರಗಳನ್ನು ಪ್ರಯೋಗಿಸಿದರೂ ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಈಶ್ವರ ಸಿದ್ದಿ ವಿರುದ್ಧ ನಾಲ್ಕು ಕಳ್ಳತನ ಪ್ರಕರಣಗಳಿದ್ದು, ಅವೆಲ್ಲವೂ ಹಗಲಿನಲ್ಲಿಯೇ ನಡೆದದ್ದಾಗಿದ್ದವು. ಪೊಲೀಸ್ ಠಾಣೆಯ ಸಮೀಪವೇ ನಡೆದ ಕಳ್ಳತನ ಪ್ರಕರಣದಲ್ಲಿಯೂ ಈಶ್ವರ ಸಿದ್ಧಿ ಅವರ ಬಂಧನ ಸಾಧ್ಯವಾಗಿರಲಿಲ್ಲ.
ಈ ಎಲ್ಲಾ ವಿಷಯ ಪೊಲೀಸರನ್ನು ಮುಜುಗರಕ್ಕೆ ಸಿಲುಕಿಸಿತ್ತು. ಒಳ್ಳೆಯ ಅಧಿಕಾರಿಗಳು ಎಂದು ಗುರುತಿಸಿಕೊಂಡವರ ಒಳ್ಳೆಯತನಕ್ಕೆ ಈಶ್ವರ ಸಿದ್ದಿ ಪ್ರಕರಣ ಕಪ್ಪು ಚುಕ್ಕೆ ಆಗಿತ್ತು. ಈ ಎಲ್ಲಾ ಹಿನ್ನಲೆ ಪೊಲೀಸರು ಈಶ್ವರ ಸಿದ್ದಿ ಬಂಧನಕ್ಕೆ ವಿಶೇಷ ತಂಡ ರಚಿಸಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ತಮ್ಮ ತಂಡ ಸಿದ್ಧಪಡಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ್ ಅವರು ಈಶ್ವರ ಸಿದ್ದಿ ಬಂಧನಕ್ಕೆ ಕಾರ್ಯತಂತ್ರ ರಚಿಸಿದರು.
ಅಕ್ಟೊಬರ್ 17ರಂದು ಈಶ್ವರ ಸಿದ್ದಿ ಅಂಕೋಲಾದ ಬಾಳೆಗುಳಿ ಕ್ರಾಸಿನ ಬಳಿ ಅಲೆದಾಡುತ್ತಿದ್ದರು. ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಎಸ್‌ಐ ರಾಜಶೇಖರ ವಂದಲಿ, ಮಹಾವೀರ ಕಾಂಬಳೆ. ಸಿದ್ದಪ್ಪ ಗುಡಿ ಹಾಗೂ ಶೇಡಜಿ ಚೌಹಾಣ್ ಅವರ ಜೊತೆ ಪೊಲೀಸ್ ಸಿಬ್ಬಂದಿ ಬಸವರಾಜ ಹಗೇರಿ, ಮಹಮದ್ ಶಫಿ, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೇಶ್ವರ, ರೇಖಾ ಎಂ ಸೇರಿ ಈಶ್ವರ ಸಿದ್ದಿ ಮೇಲೆ ದಾಳಿ ಮಾಡಿದರು. ಅಲ್ಲಿಯೇ ಈಶ್ವರ ಸಿದ್ದಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಈ ವೇಳೆ ಈಶ್ವರ ಸಿದ್ದಿ ಅವರ 18 ಲಕ್ಷ ರೂ ಮೌಲ್ಯದ 137 ಗ್ರಾಂ ಚಿನ್ನದ ಆಭರಣಗಳು ಸಿಕ್ಕಿದವು. ಅದರೊಂದಿಗೆ 80 ಸಾವಿರ ರೂ ಮೌಲ್ಯದ ಸ್ಕೂಟಿಯೊಂದನ್ನು ಪೊಲೀಸರು ವಶಕ್ಕೆಪಡೆದರು.