ತಮ್ಮ ಜೀವದ ಹಂಗು ತೊರೆದು ಬೇರೆಯವರ ಜೀವ ರಕ್ಷಿಸುವ ಜೀವ ರಕ್ಷಕ ಸಿಬ್ಬಂದಿಗೆ ಸರ್ಕಾರ ಸಕಾಲದಲ್ಲಿ ಸಂಬಳ ಕೊಡುತ್ತಿಲ್ಲ. ಗಾಳಿ, ಮಳೆ, ಚಳಿ ಲೆಕ್ಕಿಸದೇ ಬಿಸಿಲಿನಲ್ಲಿಯೂ ಶ್ರಮಿಸುವ ಜೀವ ರಕ್ಷಕ ಸಿಬ್ಬಂದಿ ಸಾವಿರಾರು ಸಮಸ್ಯೆ ಅನುಭವಿಸುತ್ತಿದ್ದು, ಅವರ ಅಳಲು ಯಾರಿಗೂ ಕೇಳುತ್ತಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಪದೇ ಪದೇ ಅವಘಡಗಳು ನಡೆಯುತ್ತಿದೆ. ಇಲ್ಲಿ ಅಳವಡಿಸಲಾದ ಸೂಚನಾ ಫಲಕಗಳನ್ನು ಮೀರಿ ಪ್ರವಾಸಿಗರು ಆಪತ್ತಿಗೆ ಸಿಲುಕುತ್ತಿದ್ದಾರೆ. ಅಪಾಯದಲ್ಲಿರುವವರನ್ನು ರಕ್ಷಿಸುವುದಕ್ಕಾಗಿಯೇ ಸರ್ಕಾರ ಕಡಲತೀರದಲ್ಲಿ ಜೀವ ರಕ್ಷಕ ಸಿಬ್ಬಂದಿ ನೇಮಿಸಿದೆ. ಆದರೆ, ಜೀವ ರಕ್ಷಕ ಸಿಬ್ಬಂದಿಯ ಜೀವಕ್ಕೆ ಇಲ್ಲಿ ರಕ್ಷಣೆ ಇಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ದುಡಿಯುತ್ತಿರುವ ಜೀವ ರಕ್ಷಕ ಸಿಬ್ಬಂದಿಯ ನೌಕರಿ ಖಾಯಂ ಅಲ್ಲ. ಅವರಿಗೆ ಕನಿಷ್ಟ ಪ್ರಮಾಣದ ಸೇವಾ ಭದ್ರತೆಯನ್ನು ಸರ್ಕಾರ ಒದಗಿಸಿಲ್ಲ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಸಲಕರಣೆಗಳನ್ನು ಸಹ ಪೂರೈಸುತ್ತಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ನೇಮಕಾತಿ ನಡೆಯುತ್ತಿಲ್ಲ. ಕಡಲತೀರದಲ್ಲಿ ಕೂರಲು ವಿಶ್ರಾಂತಿ ಕೊಠಡಿಗಳು ಸಹ ಸರಿಯಾಗಿಲ್ಲ.
ಈ ಸಮಸ್ಯೆಗಳಿಂದ ಬೇಸತ್ತು ಜೀವ ರಕ್ಷಕ ಸಿಬ್ಬಂದಿ ಕೆಲಸ ಬಿಟ್ಟರೆ ಆ ಸ್ಥಳಕ್ಕೆ ಹೊಸ ಸಿಬ್ಬಂದಿ ನೇಮಿಸಲಾಗುತ್ತದೆ. ಆದರೆ, ಹೊಸ ಸಿಬ್ಬಂದಿಗೆ ತರಬೇತಿ ನೀಡುವ ಕೆಲಸ ನಡೆಯುತ್ತಿಲ್ಲ. ತರಬೇತಿ ಇಲ್ಲದವರನ್ನು ಕಡಲತೀರಕ್ಕೆ ನೇಮಿಸಿದರೆ ಅವರಿಂದ ರಕ್ಷಣೆ ಹೇಗೆ ಸಾಧ್ಯ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಜೀವ ರಕ್ಷಕ ಸಿಬ್ಬಂದಿಗೆ ಕಳೆದ 8 ವರ್ಷಗಳಿಂದ ಒಮ್ಮೆಯೂ ಸಂಬಳ ಏರಿಕೆ ಆಗಿಲ್ಲ. ತಿಂಗಳಿಗೆ ಸರಿಯಾಗಿ ಸಂಬಳವೂ ಆಗಲ್ಲ. ತುಕ್ಕು ಹಿಡಿದ ಸಲಕರಣೆಗಳನ್ನು ಬದಲಿಸುವಂತೆ ಕೋರಿದರೂ ಅದನ್ನು ಬದಲಿಸುತ್ತಿಲ್ಲ.
ಅನೇಕ ಕಡಲತೀರದಲ್ಲಿ ವಾಚ್ ಟವರ್ ಅಗತ್ಯವಿದ್ದು, ಅದನ್ನು ಸರ್ಕಾರ ನಿರ್ಮಿಸಿಲ್ಲ. ಕಡಲತೀರಗಳಲ್ಲಿ ಕೆಲವಡೆ ಅಗತ್ಯ ಸಿಬ್ಬಂದಿ ನೇಮಿಸಲಾಗಿದ್ದು, ಅದನ್ನುಹೊರತುಪಡಿಸಿ ಸಿದ್ದಾಪುರದ ಬುರುಡೆ ಜಲಪಾತ ಹಾಗೂ ಅಂಕೋಲಾದ ವಿಭೂತಿ ಜಲಪಾತದಲ್ಲಿ ಸಿಬ್ಬಂದಿ ನೇಮಕಾತಿ ನಡೆದಿದೆ. ಉಳಿದ ಜಲಪಾತಗಳಲ್ಲಿ ಜೀವ ರಕ್ಷಕ ಸಿಬ್ಬಂದಿ ನೇಮಕಾತಿಯೂ ನಡೆದಿಲ್ಲ.
`ಕಡಲತೀರದಲ್ಲಿ ನಿತ್ಯ ಒಂದಿಲ್ಲೊoದು ಅವಘಡ ನಡೆಯುತ್ತಿದ್ದು, ಜೀವ ರಕ್ಷಕ ಸಿಬ್ಬಂದಿಯಿAದ ಅನೇಕರ ಜೀವ ಉಳಿದಿದೆ. ಅಂಥ ಜೀವ ರಕ್ಷಕ ಸಿಬ್ಬಂದಿಯ ಸಮಸ್ಯೆಗಳನ್ನು ಸರ್ಕಾರ ಅರಿತು ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಈ ಬಗ್ಗೆ ಹೋರಾಟ ಅನಿವಾರ್ಯ’ ಎಂದು ಮೀನುಗಾರ ಮುಖಂಡ ಉಮಾಕಾಂತ ಹೊಸಕಟ್ಟ ಎಚ್ಚರಿಸಿದ್ದಾರೆ.

