ಅಡ್ಡಾದಿಡ್ಡಿ ಬೈಕ್ ಓಡಿಸುತ್ತ ಪಟಾಕಿ ಸಿಡಿಸಿ ಮೋಜು-ಮಸ್ತಿ ಮಾಡಿದ ಯುವಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.
ಕಾರವಾರದ ನಂದನಗದ್ದಾದ ಸಮಾದೇವಿ ದೇವಸ್ತಾನದ ಆದಿತ್ಯ ಸಂದೀಪ ಹುಲ್ಗೇಕರ್ ಹಾಗೂ ವಿದೀಶ ಸಂದೀಪ ಜೋಗಳೇಕರ್ ಅಡ್ಡಾದಿಡ್ಡಿ ಬೈಕ್ ಓಡಿಸಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಹೆಲ್ಮೆಟ್ ಧರಿಸಿದೇ ಬೈಕ್ ಓಡಿಸಿದ ಅವರಿಬ್ಬರು ಬೈಕು ಚಲಿಸುವಾಗಲೇ ಪಟಾಕಿ ಸಿಡಿಸಿ ರಾಕೇಟ್ ಹಾರಿಸಿದ ವಿಡಿಯೋ ವೈರಲ್ ಆಗಿದೆ. ಇದೇ ವಿಡಿಯೋ ಆಧಾರದಲ್ಲಿ ಪೊಲೀಸರು ಅವರಿಬ್ಬರನ್ನು ವಶಕ್ಕೆಪಡೆದಿದ್ದಾರೆ.
ದೀಪಾವಳಿ ಅಂಗವಾಗಿ ಪಟಾಕಿ ಖರೀದಿಸಿದ್ದ ಅವರಿಬ್ಬರು ಅದನ್ನು ಅಸುರಕ್ಷತಾ ವಿಧಾನದಲ್ಲಿ ಸಿಡಿಸಿದ್ದರು. ಕಾರವಾರದ ಟೋಲನಾಕಾ ಬಾಂಡಿಶೆಟ್ಟಾ ಕಡೆ ಹೋಗುವ ರಸ್ತೆಯಲ್ಲಿ ಬೈಕ್ ಓಡಿಸುತ್ತಲೇ ಪಟಾಕಿ ಸಿಡಿಸುತ್ತಿದ್ದರು. ಆದಿತ್ಯ ಸಂದೀಪ ಹುಲ್ಗೇಕರ್ ಅವರು ಜೋರಾಗಿ ಬೈಕ್ ಓಡಿಸುತ್ತಿದ್ದು, ಹಿಂಬದಿ ಸವಾರ ವಿದೀಶ ಸಂದೀಪ ಜೋಗಳೇಕರ್ ಪಟಾಕಿ ಹಚ್ಚಿದ್ದರು.
ವೇಗವಾಗಿ ಚಲಿಸುವ ಬೈಕಿನಲ್ಲಿ ಅವರಿಬ್ಬರೂ ಜೋರಾಗಿ ಕೇಕೇ ಹಾಕುತ್ತ ಹೊರಟಿದ್ದರು. ಇದನ್ನು ಇನ್ನೊಂದು ಬೈಕಿನಲ್ಲಿದ್ದವರು ವಿಡಿಯೋ ಮಾಡಿದ್ದರು. ಆ ವಿಡಿಯೋವನ್ನು ಯುವಕರಿಬ್ಬರು ಎಲ್ಲಡೆ ಹಂಚಿಕೊAಡು ತಾವು ಮಾಡಿದ ಸಾಹಸದ ಬಗ್ಗೆ ಬಣ್ಣಿಸುತ್ತಿದ್ದರು. ಅಕ್ಟೊಬರ್ 22ರಂದು ಈ ವಿಡಿಯೋ ಕಾರವಾರದ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಶ್ರೀಕಾಂತ ರಾತೋಡ್ ಅವರಿಗೆ ಕಾಣಿಸಿತು.
ಶ್ರೀಕಾಂತ ರಾತೋಡ್ ಅವರು ಆ ಬೈಕಿನ ಜೊತೆ ಬೈಕ್ ಸವಾರರನ್ನು ಕರೆಯಿಸಿ ಮಾತನಾಡಿದರು. ಕಾನೂನಿನಪ್ರಕಾರ ತಪ್ಪು ಮಾಡಿದ ಕಾರಣ ಅವರಿಬ್ಬರನ್ನು ವಶಕ್ಕೆಪಡೆದರು. ಬೈಕನ್ನು ಜಪ್ತು ಮಾಡಿದರು.
`ಸಂಚಾರಿ ನಿಯಮ ಪಾಲಿಸಿ.. ಕಾನೂನು ಗೌರವಿಸಿ’
ಬೈಕಿನಲ್ಲಿ ಪಟಾಕಿ ಸಿಡಿಸಿದ ಹಾಗೂ ಪೊಲೀಸ್ ಕ್ರಮದ ವಿಡಿಯೋ ಇಲ್ಲಿ ನೋಡಿ..

