ಸಾಕಷ್ಟು ಮನವಿ, ಹೋರಾಟದ ಎಚ್ಚರಿಕೆ ನೀಡಿದರೂ ಕಾರವಾರ ನಗರಸಭೆ ಗುತ್ತಿಗೆದಾರರು ಮಾಡಿದ ಕೆಲಸಕ್ಕೆ ಪ್ರತಿಯಾಗಿ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಅಸಮಧಾನಕ್ಕೆ ಒಳಗಾದ ಗುತ್ತಿಗೆದಾರರು ಮಂಗಳವಾರ ಮತ್ತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಭೇಟಿಯಾಗಿ ಹೋರಾಟದ ಎಚ್ಚರಿಕೆ ನೀಡಿದರು.
ಕಾರವಾರ ನಗರಸಭೆಯ ಬೇಜವಬ್ದಾರಿತನದ ಬಗ್ಗೆ ತಾಲೂಕಾ ನೋಂದಾಯಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಜಯ ಬಿಲಿಯ ಅವರು ಅಸಮಧಾನವ್ಯಕ್ತಪಡಿಸಿದರು. `ಸೆಪ್ಟೆಂಬರ್ 22ರಂದು ನಡೆದ ಸಭೆಯಲ್ಲಿ ಬಾಕಿ ಮೊತ್ತ ಪಾವತಿಸುವಂತೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿ ಪ್ರಶ್ನಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ’ ಎಂದು ಸಂಘದ ಉಪಾಧ್ಯಕ್ಷ ಛತ್ರಪತಿ ಮಾಳ್ಸೆಕರ್, ಪ್ರಮುಖರಾದ ಸತೀಶ ವಿ ನಾಯ್ಕ, ರಾಮನಾಥ ನಾಯ್ಕ ಮೊದಲಾದವರು ಸಿಡಿಮಿಡಿಗೊಂಡರು.
`ಗುತ್ತಿಗೆದಾರರು ಸಾಲ ಮಾಡಿ ಸರ್ಕಾರದ ಕೆಲಸ ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಗುತ್ತಿಗೆದಾರರು ಆದ್ಯತೆ ಕೊಟ್ಟಿದ್ದಾರೆ. ಅಗತ್ಯವಿರುವಾಗ ಗುತ್ತಿಗೆದಾರರನ್ನು ಬಳಸಿಕೊಂಡ ನಗರಸಭೆ ನಂತರ ನಡುನೀರಿನಲ್ಲಿ ಕೈ ಬಿಟ್ಟಿದೆ. ಸಾಕಷ್ಟು ಬಾರಿ ತಿಳಿಸಿದರೂ ಪ್ರಾಮಾಣಿಕವಾಗಿ ದುಡಿದ ಹಣ ಪಾವತಿ ಮಾಡುತ್ತಿಲ್ಲ’ ಎಂದು ಗುತ್ತಿಗೆದಾರರಾದ ದೀಪಕ ಕುಡಾಳಕರ್, ಕೃಷ್ಣಾನಂದ ನಾಯ್ಕ, ಉದಯ ಕೋಠಾರಕರ್, ರಾಜೇಂದ್ರ ಅಂಚೆಕರ್, ಮನೋಜ ನಾಯಕ ಅವರು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
`2021-22ನೇ ಸಾಲಿನಿಂದಲೂ ಮಾಡಿದ ಕೆಲಸದ ಹಣ ಪಾವತಿ ಆಗಿಲ್ಲ. ಹಳೆಯ ಕಾಮಗಾರಿಯ ಮೊತ್ತವನ್ನು ಮೊದಲು ಪಾವತಿ ಮಾಡಬೇಕು. ಅದಾದ ನಂತರವೇ ಹೊಸ ಕಾಮಗಾರಿ ನಡೆಸಲು ನಿರ್ದೇಶನ ನೀಡಬೇಕು. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಸ್ಪಷ್ಠ ನಿರ್ದೇಶನ ನೀಡಬೇಕು’ ಎಂದು ಅವರೆಲ್ಲರೂ ಸೇರಿ ಒತ್ತಾಯಿಸಿದರು.