ಕಾರವಾರದ ಕೈಗಾ ಕಾಡಿನ ಬಳಿ ಅಂಕೋಲಾದ ಕರಿಕಲ್ ನಾರಾಯಣ ಹೆಗಡೆ ಅವರಿಗೆ ಪಟ್ಟೆ ಹುಲಿ ಕಾಣಿಸಿದೆ. ಹುಲಿ ಓಡಾಟದ ವಿಡಿಯೋ ಮಾಡಿದ ಅವರು ಅದನ್ನು ತಮ್ಮ ಬಳಗದಲ್ಲಿ ಹಂಚಿದ್ದಾರೆ.
ADVERTISEMENT
ಈ ಮಾರ್ಗದಲ್ಲಿ ಈಚೆಗೆ ಪದೇ ಪದೇ ಹುಲಿ ದರ್ಶನವಾಗುತ್ತಿದೆ. 2023ರ ಅವಧಿಯಲ್ಲಿ ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಯೊಬ್ಬರಿಗೆ ಇಲ್ಲಿ ಹುಲಿ ಕಾಣಿಸಿಕೊಂಡಿತ್ತು. ಅದನ್ನು ಅವರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು. ರಸ್ತೆ ಪಕ್ಕದಲ್ಲಿದ್ದ ಹುಲಿ ಕೈಗಾ ಉದ್ಯೋಗಿ ಚೇತನ ಅವರ ಕಾರಿನ ಬಳಿ ಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. 2024ರ ಜುಲೈ ತಿಂಗಳಿನಲ್ಲಿಯೂ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಸಾಯಿ ಬಿಜ್ಜೂರು ಎಂಬಾತರಿಗೆ ಹುಲಿ ದರ್ಶನವಾಗಿತ್ತು. ಅದನ್ನು ಸಹ ಅವರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು.
ADVERTISEMENT
ಅದಾದ ನಂತರ 2025ರ ಸೆಪ್ಟೆಂಬರ್ ಅವಧಿಯಲ್ಲಿ ಹಗಲಿನಲ್ಲಿಯೇ ಇಲ್ಲಿ ಹುಲಿ ಓಡಾಟ ಜೋರಾಗಿತ್ತು. ಸೆಪ್ಟೆಂಬರ್ 12ರಂದು ಬಾರೆ ಘಟ್ಟದ ಪ್ರದೇಶದಲ್ಲಿ ಹುಲಿ ಓಡಾಡಿದನ್ನು ಜಿಕೆ ರಾಮ್ ಕಂಪನಿಯ ವಾಹನ ಚಾಲಕ ಸೈನಾಥ ನಾಯಕ್ ಅವರು ಕಂಡಿದ್ದರು. ಸುಮಾರು 20 ನಿಮಿಷಗಳ ಕಾಲ ಹುಲಿ ರಸ್ತೆಯಲ್ಲಿ ಓಡಾಡಿದ ದೃಶ್ಯವನ್ನು ಅವರು ಸೆರೆ ಹಿಡಿದಿದ್ದರು.
ADVERTISEMENT
ಸದ್ಯ ಅಂಕೋಲಾದ ಕರಿಕಲ್ ನಾರಾಯಣ ಹೆಗಡೆ ಅವರು ಕೈಗಾ-ಕಾರವಾರ ರಸ್ತೆಯಲ್ಲಿ ಸಂಚರಿಸುವಾಗ ಹುಲಿ ನೋಡಿದ್ದಾರೆ. ಕೃಷಿಕ ಸಮಾಜದ ಅಧ್ಯಕ್ಷರು ಆಗಿರುವ ನಾರಾಯಣ ಹೆಗಡೆ ಅವರು ಕೃಷಿ-ತೋಟಗಳಿಗೆ ನೀರಾವರಿ ಕಾಯಕದಲ್ಲಿ ತೊಡಗಿದ್ದಾರೆ. ಕೈಗಾ ಬಳಿ ರೈತರನ್ನು ಭೇಟಿ ಮಾಡಿ ಅವರ ಭೂಮಿಗೆ ನೀರು ಹಾಯಿಸುವ ಕೆಲಸಕ್ಕಾಗಿ ಅವರು ಆ ಮಾರ್ಗಕ್ಕೆ ತೆರಳಿದ್ದರು. ಅಕ್ಟೊಬರ್ 16ರಂದು ಅವರು ತಮ್ಮ ಪತ್ನಿ ಗೀತಾ ಹೆಗಡೆ ಅವರ ಜೊತೆ ಕೈಗಾದ ಕೃಷಿ ಕ್ಷೇತ್ರಕ್ಕೆ ತೆರಳಿ ಯಲ್ಲಾಪುರದ ಕಡೆ ಮರಳುತ್ತಿದ್ದರು. ಹರ್ಟುಗಾ ಬಳಿ ನಾರಾಯಣ ಹೆಗಡೆ ಅವರ ಕಾರನ್ನು ಹುಲಿ ಅಟ್ಟಗಟ್ಟಿತು.
ಬೆಳಗ್ಗೆ 11.45ರಿಂದ 12.20ರವರೆಗೆ ಈ ಹುಲಿ ರಸ್ತೆ ಮೇಲೆ ಸಂಚರಿಸಿದ್ದು, ಕಾರು ಜೋರಾಗಿ ಚಲಿಸಲು ಅವಕಾಶವನ್ನು ಮಾಡಿಕೊಡಲಿಲ್ಲ. ಸುಮಾರು ಒಂದುವರೆ ಕಿಮೀ ದೂರ ಹುಲಿ ರಸ್ತೆ ಮೇಲೆ ಸಂಚರಿಸಿದ್ದು, ನಾರಾಯಣ ಹೆಗಡೆ ಅವರು ಅದರ ಹಿಂದೆ ನಿಧಾನವಾಗಿ ಕಾರು ಓಡಿಸಿದರು. ಒಂದರೆಡು ಬಾರಿ ದಾರಿ ಬಿಡುವಂತೆ ಕೋರಿ ಕಾರಿನ ಹಾರ್ನ ಅದುಮಿದರಾದರೂ ಹುಲಿ ದಾರಿ ಬಿಡಲಿಲ್ಲ. ಕಾರಿನ ಕಡೆ ತಿರುಗಿ ಹುಲಿ ಗುರ್ ಗುರ್ ಎಂದಾಗ ಅವರು ಪದೇ ಪದೇ ಹಾರ್ನ ಹೊಡೆಯುವುದನ್ನು ಬಿಟ್ಟರು.
`ರಾತ್ರಿ ಸಂಚಾರದ ವೇಳೆ ಹುಲಿ ಅನೇಕ ಬಾರಿ ಕಾಣಿಸಿದೆ. ಆದರೆ, ಹಗಲಿನ ವೇಳೆ ರಸ್ತೆಯ ಮೇಲೆ ಹುಲಿ ಕಾಣಿಸಿದ್ದು ಇದೇ ಮೊದಲು’ ಎಂದು ನಾರಾಯಣ ಹೆಗಡೆ ಅವರು ಹೇಳಿದರು.