ಭಟ್ಕಳ ಸಂಶುದ್ದೀನ್ ಸರ್ಕಲಿನಲ್ಲಿ ಮಾದಕ ವಸ್ತು ಸೇವಿಸಿದ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿ ಮೇಲೆ ಚಾಕುವಿನ ದಾಳಿ ನಡೆಸಿದ್ದು, ವೆಲ್ಡಿಂಗ್ ಕೆಲಸ ಮಾಡುವ ಮಂಜುನಾಥ ನಾಯ್ಕ ಎಂಬಾತರು ಗಾಯಗೊಂಡಿದ್ದಾರೆ. ಡಿ ಪಿ ಕಾಲೋನಿಯ ನಗೀನಕುಮಾರ ಶೆಟ್ಟಿ ದಾಳಿ ನಡೆಸಿದವರಾಗಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.
ಭಟ್ಕಳ ಪೊಲೀಸ್ ಕ್ವಾಟರ್ಸ ಹತ್ತಿರದ ಡಿ ಪಿ ಕಾಲೋನಿಯ ನಗೀನಕುಮಾರ ಶೆಟ್ಟಿ ಹಾಗೂ ಮಂಜುನಾಥ ಮಾಸ್ತಪ್ಪ ನಾಯ್ಕ ನಡುವಿನ ಹಳೆಯ ದ್ವೇಷ ಈ ದುರಂತಕ್ಕೆ ಕಾರಣ ಎನ್ನುವ ಮಾಹಿತಿಯಿದೆ. ಅಕ್ಟೊಬರ್ 31ರ ಮಧ್ಯಾಹ್ನ ತಲಗೇರಿಯ ವ್ಯಾಪಾರಿ ಗಣೇಶ ನಾಯ್ಕ ಹಾಗೂ ಪುರವರ್ಗದ ಮಂಜುನಾಥ ನಾಯ್ಕ ಅವರು ಛಾಯಾ ಲಾಡ್ಜ ಹೊಟೇಲ್ ಹತ್ತಿರ ಊಟಕ್ಕೆ ಹೋಗಿದ್ದರು. ಅಲ್ಲಿಂದ ಮರಳುವಾಗ ಅವರಿಬ್ಬರಿಗೂ ನಗೀನಕುಮಾರ ಶೆಟ್ಟಿ ಅವರು ಎದುರಾದರು.
ನಶೆಯಲ್ಲಿದ್ದ ನಗೀನಕುಮಾರ ಶೆಟ್ಟಿ ಅವರು `ನಿನ್ನೆ ಹಣ ಕೇಳಿದ್ರೆ ಬೈಯ್ದು ಕಳಿಸಿದ್ದಿಯಾ. ಇವತ್ತು ನಿನ್ನನ್ನ ಬಿಡೋದಿಲ್ಲ’ ಎಂದು ಅಬ್ಬರಿಸಿದರು. ಅದಾದ ನಂತರ ಮಂಜುನಾಥ ನಾಯ್ಕ ಅವರ ಮೇಲೆ ಚಾಕು ಚುಚ್ಚಿದರು. ಮಂಜುನಾಥ ನಾಯ್ಕ ಅವರ ಕಂಕಳ, ಕುತ್ತಿಗೆ, ಹೊಟ್ಟೆ, ಕಿವಿಯ ಹತ್ತಿರ ಹಾಗೂ ತಲೆಯ ಭಾಗಕ್ಕೆ ಚಾಕು ಇರಿದಿದ್ದರಿಂದ ಅವರು ಗಾಯಗೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಪಿಐ ದಿವಾಕರ ಪಿ ಎಂ ಮತ್ತು ಪಿಎಸ್‌ಐ ನವೀನ್ ನಾಯ್ಕ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಗಾಯಗೊಂಡ ಮಂಜುನಾಥನನ್ನು ಮೊದಲು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸ್ಥಳಾಂತರಿಸಲಾಗಿದೆ.