ಮನಸ್ಸಿಗೆ ಬೇಸರವಾದ ಕಾರಣ ನಾಗರತ್ನ ನಾಯ್ಕ ಅವರು ಕಳೆನಾಶಕ ಕುಡಿದಿದ್ದಾರೆ. ಮಣಿಪಾಲ್ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಕುಮಟಾದ ನಾಗರತ್ನ ನಾಯ್ಕ (28) ಅವರು ಗೌರಸ್ಕಿ ಬಳಿಯ ನಾಗೂರಿನ ಲೋಹಿತ ನಾಯ್ಕ ಅವರನ್ನು ಮದುವೆ ಆಗಿದ್ದರು. 2018ರಿಂದ 2025ರವರೆಗೂ ಅವರು ಸುಂದರ ಸಂಸಾರ ನಡೆಸಿದ್ದರು. ಈ ನಡುವೆ ನಾಗರತ್ನ ನಾಯ್ಕ ಅವರು ಮಾನಸಿಕವಾಗಿ ಕುಗ್ಗಿದ್ದರು. ಅವರ ಬೇಸರಕ್ಕೆ ಕಾರಣ ಏನು? ಎಂದು ಯಾರಿಗೂ ಹೇಳಿರಲಿಲ್ಲ.
ನವೆಂಬರ್ 26ರಂದು ಸಹ ಬೇಸರದಲ್ಲಿದ್ದ ಅವರು ಕಳೆನಾಶಕ ಸೇವಿಸಿದರು. ಇದನ್ನು ಗಮನಿಸಿದ ಕುಟುಂಬದವರು ನಾಗರತ್ನ ನಾಯ್ಕ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಅಲ್ಲಿನ ವೈದ್ಯರು ಉನ್ನತ ಮಟ್ಟದ ಚಿಕಿತ್ಸೆಗೆ ಶಿಫಾರಸ್ಸು ಮಾಡಿದ ಕಾರಣ ಮಣಿಪಾಲ್ ಕಸ್ತೂರಿಬಾ ಆಸ್ಪತ್ರೆಗೆ ದಾಖಲಿಸಿದರು.
ನವೆಂಬರ್ 26ರಿಂದ ಕಸ್ತೂರಿಬಾ ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದ ನಾಗರತ್ನ ನಾಯ್ಕ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಲಿಲ್ಲ. ನವೆಂಬರ್ 28ರಂದು ಅವರು ಕೊನೆಯುಸಿರೆಳೆದರು. ಈ ಸಾವಿನ ಬಗ್ಗೆ ಮಿರ್ಜಾನಿನ ನಾರಾಯಣ ನಾಯ್ಕ ಅವರು ಪೊಲೀಸರಿಗೆ ತಿಳಿಸಿದ್ದು, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು.