ಬ್ಯಾಂಕ್ ಆಫ್ ಬರೋಡಾದಲ್ಲಿ ಉಳಿತಾಯ ಖಾತೆ ಹೊಂದಿದ್ದ ಪರಶುರಾಮ ನಾಯ್ಕ ಅವರ 1 ಲಕ್ಷ ರೂ ಕಾಣೆಯಾಗಿದೆ. ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ ವಂಚಕರು ಅಲ್ಲಿದ್ದ ಹಣ ಲಪಟಾಯಿಸಿದ್ದಾರೆ.
ಸಿದ್ದಾಪುರದ ನೀಡಗೋಡಿನ ಪರಶುರಾಮ ಈರಾ ನಾಯ್ಕ ಅವರು ಪಾಸ್ಟ ಪುಡ್ ಅಂಗಡಿ ನಡೆಸುತ್ತಾರೆ. ತಮ್ಮ ಉಳಿತಾಯದ ಹಣವನ್ನು ಅವರು ಸಿದ್ದಾಪುರದ ಜೋಗ ರಸ್ತೆಯ ಹೊಸೂರಿನಲ್ಲಿರುವ ಕೊಡಚಾದ್ರಿ ಚೀಟ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಿರುವಾಗ ಚೀಟ್ ಫಂಡ್ ಕಂಪನಿಯವರು ಅವರ ಹೂಡಿಕೆ ಮೊತ್ತವನ್ನು ಹಿಂತಿರುಗಿಸಿದ್ದು, ಅವರ ಬ್ಯಾಂಕ್ ಆಫರ್ ಬರೋಡಾದಲ್ಲಿ ಉಳಿತಾಯ ಖಾತೆಯಲ್ಲಿ 2.80 ಲಕ್ಷ ರೂ ಜಮಾ ಆಗಿತ್ತು.
ಆ ಪೈಕಿ ಅಲ್ಪ ಪ್ರಮಾಣದ ಹಣವನ್ನು ಪರಶುರಾಮ ನಾಯ್ಕ ಅವರು ಬಳಸಿಕೊಂಡಿದ್ದರು. ಉಳಿದ 2.37 ಲಕ್ಷ ರೂ ಖಾತೆಯಲ್ಲಿ ಹಾಗೇ ಇತ್ತು. ನವೆಂಬರ್ 8ರಂದು ಸಂಜೆ ಪರಶುರಾಮ ನಾಯ್ಕ ಅವರು ಅಂಗಡಿಯಲ್ಲಿದ್ದಾಗ ಅವರ ಖಾತೆಯಿಂದ 50 ಸಾವಿರ ರೂ ಕಡಿತವಾದ ಬಗ್ಗೆ ಮೆಸೆಜ್ ಬಂದಿತು. ಅದಾದ ಒಂದು ತಾಸಿನ ನಂತರ ಮತ್ತೆ 50 ಸಾವಿರ ರೂ ಕಡಿತವಾದ ಮೆಸೆಜ್ ಬಂದಿತು. ಇದರಿಂದ ಗಾಬರಿಗೆ ಒಳಗಾದ ಪರಶುರಾಮ ನಾಯ್ಕ ಅವರು ಸ್ನೇಹಿತರಿಗೆ ಫೋನ್ ಮಾಡಿದರು.
ಸ್ನೇಹಿತರು ಬ್ಯಾಂಕ್ ಖಾತೆ ಹ್ಯಾಕ್ ಆಗಿರುವ ವಿಷಯ ತಿಳಿಸಿದರು. ಬ್ಯಾಂಕಿಗೆ ಹೋಗಿ ಹೇಳೋಣ ಎಂದರೆ ಆ ದಿನ ಶನಿವಾರವಾಗಿದ್ದು, ಆಗಲೇ ಸಂಜೆ ಆಗಿತ್ತು. ಮರುದಿನ ಭಾನುವಾರ ಆಗಿದ್ದರಿಂದ ಬ್ಯಾಂಕಿಗೂ ರಜೆ ಇತ್ತು. ಹೀಗಾಗಿ ಪರಶುರಾಮ ನಾಯ್ಕ ಅವರು 1 ಲಕ್ಷ ರೂ ವಂಚನೆಯಾದ ಬಗ್ಗೆ 1930ಗೆ ಫೋನ್ ಮಾಡಿ ದೂರಿದರು.
ಸೋಮವಾರ ಬ್ಯಾಂಕಿಗೆ ಹೋಗಿ ತಮ್ಮ ಸಮಸ್ಯೆ ವಿವರಿಸಿದರು. ಬ್ಯಾಂಕಿನವರು ನೀಡಿದ ಮಾಹಿತಿ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದರು. `ಮಾಹಿತಿ ತಂತ್ರಜ್ಞಾನ ದುರುಪಯೋಗ ನಡೆದಿದ್ದು, ತಮ್ಮ ಹಣ ತಮಗೆ ಮರಳಿಸಿ’ ಎಂದವರು ಮನವಿ ಮಾಡಿದರು.