ಅಲ್ಲಿ-ಇಲ್ಲಿ ಸುತ್ತಾಡುತ್ತಲೇ 7 ಸಾವಿರ ಮೈಲು ಸಂಚರಿಸಿದ ನಾರ್ವೇಯ ಸ್ಯಾಮ್ ಹಾಗೂ ಆರ್ಟಿನ್ ಭಾರತ ತಲುಪಿದ್ದು, ಇಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಸತಿ-ಪತಿಗಳಾಗಿದ್ದಾರೆ. ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಸಪ್ತಪದಿ ತುಳಿದ ಅವರು ಜೀವನದ ಉದ್ದಕ್ಕೂ ಒಟ್ಟಿಗೆ ಬದುಕುವ ಶಪಥ ಮಾಡಿದ್ದಾರೆ.
ನಾರ್ವೇಯ ಸ್ಯಾಮ್ ಅವರು ವೃತ್ತಿಯಲ್ಲಿ ಅಡುಗೆ ತಯಾರಕರು. ಅವರು ಅನೇಕ ವರ್ಷಗಳಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದು, ಅದರಲ್ಲಿಯೂ ಗೋಕರ್ಣ ಎಂದರೆ ಅವರಿಗೆ ಅಚ್ಚುಮೆಚ್ಚು. ಆರ್ಟಿನ್ ಅವರು ಖಾಸಗಿ ಕಂಪನಿಯೊAದರ ಉದ್ಯೋಗಿ. ಆರ್ಟಿನ್ ಅವರಿಗೆ ಭಾರತ ಪರಿಚಯವಿದ್ದದಲ್ಲ. ಆದರೆ, ಸ್ಯಾಮ್ ಅವರ ಪ್ರೇಮದ ಪಾಶಕ್ಕೆ ಆರ್ಟಿನ್ ಅವರು ಬಿದ್ದಾಗ ಭಾರತದ ಬಗ್ಗೆ ಅವರಿಗೂ ಪ್ರೀತಿ ಮೂಡಿತು.
ಅದರ ಪರಿಣಾಮ ಅವರಿಬ್ಬರು ಸೇರಿ ಸಾಗರ ದಾಟಿ ಈ ಪುಣ್ಯ ಭೂಮಿಗೆ ಬಂದಿದ್ದು ಮಂಗಳವಾರ ಗುರು-ಹಿರಿಯರ ಸಮ್ಮುಖದಲ್ಲಿ ತಮ್ಮ ಜೀವನದ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ತಾವು ಉಳಿದಿದ್ದ ರೆಸಾರ್ಟಿಗೆ ವೈದಿಕರನ್ನು ಕರೆಯಿಸಿ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಗೋಕರ್ಣದ ಕುಡ್ಲೆ ಬೀಚ್‌ನ ಕೆಫೆ ಪ್ಯಾರಡೈಸ ರೆಸಾರ್ಟನ ಆವಾರದಲ್ಲಿ ಅವರಿಬ್ಬರ ವಿವಾಹ ಮಹೋತ್ಸವ ನಡೆದಿದ್ದು, ವಿದೇಶಿ ಜೋಡಿಗೆ ಭಾರತಿಯ ವೈದಿಕರು ಮಂತ್ರಘೋಷ ಪಠಿಸಿ ಹಾರೈಸಿದ್ದಾರೆ.
ಕೆಫೆಯ ಮಾಲಿಕರಾದ ಮುರಳಿ ಕಾಮತ್ ಹಾಗೂ ಪ್ರಮುಖರಾದ ನಿತ್ಯಾನಂದ ಶೆಟ್ಟಿ ಅವರು ದಂಪತಿಗೆ ಅಕ್ಷತೆ ಹಾಕಿ ಹಾರೈಸಿದರು. ವೈದಿಕರಾದ ಪ್ರಸನ್ನ ಜೋಗಭಟ್, ಮಹೇಶ ಅಡಿ, ಕೃಷ್ಣ ಸೂರಿ, ವಿನಾಯಕ ಉಪಾಧ್ಯ ವಿವಾಹ ಕೈಂಕರ್ಯ ನೆರವೇರಿಸಿದರು.