ಅನಾರೋಗ್ಯಕ್ಕೆ ಒಳಗಾದ ಆಪ್ತರನ್ನು ಮಾತನಾಡಿಸುವುದಕ್ಕಾಗಿ ಆಸ್ಪತ್ರೆಗೆ ಬಂದಿದ್ದ ರವಿಕಲಾ ಗುರವ್ ಅವರ ಸ್ಕೂಟಿಯಲ್ಲಿದ್ದ ಚಿನ್ನಾಭರಣ ದೋಚಿದ ರಫೀಕ್ ಖಾನ್ ಸಿಕ್ಕಿಬಿದ್ದಿದ್ದಾರೆ. ಜೊತೆಗೆ ಅವರು ದೋಚಿದ್ದ ಚಿನ್ನಾಭರಣವೂ ಸಿಕ್ಕಿದೆ.
ಅಂಕೋಲಾ ವಂದಿಗೆಯ ರವಿಕಲಾ ಹರಿಶ್ಚಂದ್ರ ಗುರವ್ ಅವರು ನವೆಂಬರ್ 18ರಂದು ಕಾರವಾರದ ಕೆರವಡಿಯಲ್ಲಿರುವ ದುರ್ಗಾಮಾತೆಯ ಜಾತ್ರೆಗೆ ಹೋಗಿದ್ದರು. ಜಾತ್ರೆ ಅಂಗವಾಗಿ ಅವರು ಮೈಮೇಲೆ ಚಿನ್ನಾಭರಣ ಧರಿಸಿದ್ದು, ಜಾತ್ರೆ ಮುಗಿದ ನಂತರ ಅದನ್ನು ಡಬ್ಬಿಯಲ್ಲಿ ತುಂಬಿ ಬಟ್ಟೆಯಲ್ಲಿ ಸುತ್ತಿದ್ದರು. ನವೆಂಬರ್ 20ರಂದು ಅವರು ಮಾವನ ಜೊತೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದರು. ಆಸ್ಪತ್ರೆ ಆವರಣದಲ್ಲಿ ಸ್ಕೂಟಿ ನಿಲ್ಲಿಸಿದ್ದು, ಸ್ಕೂಟಿ ಮೇಲೆ ಬ್ಯಾಗ್ ಇರಿಸಿದ್ದರು. ಆಸ್ಪತ್ರೆಯಿಂದ ಹೊರಬರುವಷ್ಟರಲ್ಲಿ ಅವರ ಆ ಬ್ಯಾಗಿನಲ್ಲಿದ್ದ ಆಭರಣಗಳು ಕಾಣೆಯಾಗಿದ್ದವು.
4.80 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ರೂ ಹಣವನ್ನು ಕಳ್ಳರು ಅಪಹರಿಸಿದ್ದರು. ಮಧ್ಯಾಹ್ನ 3ರಿಂದ 3.30ರ ಅವಧಿಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ರವಿಕಲಾ ಗುರವ್ ಪೊಲೀಸರಲ್ಲಿ ಹೇಳಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದರು. ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ ಹಾಗೂ ಕಾರವಾರ ಉಪವಿಭಾಗದ ಡಿಎಸ್ಪಿ ಎಸ್ ವಿ ಗಿರೀಶ ಸೇರಿ ತನಿಖಾ ತಂಡ ರಚಿಸಿದ್ದು, ದೂರು ಬಂದ 24 ತಾಸಿನೊಳಗೆ ಪೊಲೀಸರು ತಮ್ಮ ಚಾಣಾಕ್ಷತನ ಉಪಯೋಗಿಸಿ ಕಳ್ಳನನ್ನು ಹುಡುಕಿದರು.
ಕಾರವಾರ ನಗರ ಪೊಲೀಸ್ ಠಾಣೆಯ ಪಿಐ ಜಯಶ್ರೀ ಎಸ್ ಎಂ ಜೊತೆ ಪಿಎಸ್‌ಐ ಬಾಬು ಆಗೇರ, ಹಾಗೂ ಸುಧಾ ಅಘನಾಶಿನಿ ಅವರು ಮೊದಲು ಸಿಸಿ ಕ್ಯಾಮರಾ ದಾಖಲೆ ಪರಿಶೀಲಿಸಿದರು. ಚಿತ್ತಾಕುಲದಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ ರಫೀಕ್ ಖಾನ್ (62) ಕಳ್ಳತನ ನಡೆಸಿರುವುದು ಗೊತ್ತಾಯಿತು. ಪೊಲೀಸ್ ಸಿಬ್ಬಂದಿ ಸುಧಾ ನಾಯ್ಕ, ರುದ್ರೇಶ ಮೈತ್ರಾಣಿ, ಶಿವರಾಮ ದೇಸಾಯಿ, ಮಹಮ್ಮದ್ ಇಸ್ಮಾಯಿಲ್ ಕೋಣನಕೇರಿ, ಸಚಿನ್ ನಾಯ್ಕ, ಅರ್ಜುನ ದೇಸಾಯಿ, ಪ್ರತಾಪಕುಮಾರ್ ಎಂ, ನಾಗೇಂದ್ರ ನಾಯ್ಕ, ಗಣೇಶ್ ನಾಯ್ಕ, ಮಾದೇವ ಸಂಗಾಪೂರ, ಪ್ರಕಾಶ ದಂಡಪ್ಪನವರ್ ಸೇರಿ ಆರೋಪಿಯನ್ನು ಬಂಧಿಸಿದರು. ಚಿನ್ನಾಭರಣದ ಜೊತೆ ಆರೋಪಿಯ ಬಳಿಯಿದ್ದ ಸ್ಕೂಟಿಯನ್ನು ಜಪ್ತು ಮಾಡಿದರು.