ಯಲ್ಲಾಪುರದ ಜೋಡಕೆರೆಯಲ್ಲಿ ದಿಢೀರ್ ಆಗಿ ಮೊಸಳೆ ಪ್ರತ್ಯಕ್ಷವಾಗಿದೆ. ನದಿಗೆ ಜೋಡಣೆಯೇ ಇಲ್ಲದ ಈ ಕೆರೆಯಲ್ಲಿ ಮೊಸಳೆ ಕಂಡು ಜನ ಹೌಹಾರಿದ್ದಾರೆ!
ಹುಬ್ಬಳ್ಳಿ-ಅಂಕೋಲಾ ರಸ್ತೆಯ ಯಲ್ಲಾಪುರ ಸ್ವಾಗತ ಪ್ರದೇಶದಲ್ಲಿ ಜೋಡಕೆರೆಯಿದೆ. ಎರಡು ಕರೆ ಇಲ್ಲಿ ಒಟ್ಟಿಗಿದ್ದು, ಅದರಲ್ಲಿ ಒಂದು ಕರೆಯನ್ನು ಸ್ಥಳೀಯರು ಸ್ವಾಗತ ಕೆರೆ ಹಾಗೂ ಮತ್ತೊಂದು ಕೆರೆಯನ್ನು ದೇವಿಕೆರೆ ಎಂದು ಕರೆಯುತ್ತಾರೆ. ಸಮೀಪದಲ್ಲಿ ಮೀನುಗಾರಿಕಾ ಇಲಾಖೆ ಕಚೇರಿಯಿದ್ದು, ಅಲ್ಲಿನವರು ಆಗಾಗ ಈ ಕೆರೆಗೆ ಮೀನು ಬಿಟ್ಟ ಉದಾಹರಣೆಯಿದೆ. ಆದರೆ, ಮೊಸಳೆ ನೋಡಿದ್ದು ಇದೇ ಮೊದಲು!
ಈ ಕೆರೆ ಸಮೀಪ ಪುರಾತನ ಕಾಲದ ಮಾರುತಿ ಮಂದಿರ ಹಾಗೂ ಅಲ್ಲಿಯೇ ಸಮೀಪದಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಿಯಿದೆ. ಈ ಕೆರೆಗೆ ಅಲ್ಲಿಯೇ ಹುಟ್ಟುವ ವರ್ತೆ ನೀರು ಆಧಾರವಾಗಿದ್ದು, ಯಾವ ನದಿಯೂ ಜೋಡಣೆ ಆಗಿಲ್ಲ. ಹೀಗಿದ್ದರೂ ದಿಢೀರ್ ಆಗಿ ಆ ಕೆರೆಯೊಳಗೆ ಮೊಸಳೆ ಕಾಣಿಸಿದೆ.
ಅಯ್ಯಪ್ಪ ಸ್ವಾಮಿ ಸನ್ನಿಧಿ, ಮಾರುತಿ ದೇವಾಲಯದ ಭಕ್ತರು ಆ ಕೆರೆಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ದೇವರ ಪಾತ್ರೆ ಶುದ್ಧೀಕರಣ, ಪುಣ್ಯ ಕಾರ್ಯ ಜೊತೆಗೆ ಗಣೇಶ ವಿಸರ್ಜನೆಗೆ ಸಹ ಈ ಕೆರೆ ಬಳಸುತ್ತಿದ್ದಾರೆ. ಹೀಗಿರುವಾದ ಇದೀಗ ಮೊಸಳೆ ಪ್ರತ್ಯಕ್ಷವಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಅನೇಕ ತಿಂಗಳ ಹಿಂದೆಯೇ ಮರಿ ಮೊಸಳೆಯನ್ನು ವ್ಯಕ್ತಿಯೊಬ್ಬರು ಇಲ್ಲಿ ತಂದು ಬಿಟ್ಟ ಅನುಮಾನಗಳಿವೆ. ಅದೇ ಮೊಸಳೆ ದೊಡ್ಡದಾಗಿ ಇದೀಗ ದಡದಲ್ಲಿ ಕಾಣಿಸಿಕೊಂಡ ಬಗ್ಗೆ ಶಂಕಿಸಲಾಗಿದೆ. ಜೋಡುಕೆರೆಯಲ್ಲಿ ಮೊಸಳೆ ಕಾಣಿಸಿದನ್ನು ಅರಣ್ಯಾಧಿಕಾರಿ ನರೇಶ ಜಿ ವಿ ಅವರು ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ದೃಢಪಡಿಸಿದ್ದಾರೆ. ದಾಂಡೇಲಿಯಿAದ ತಜ್ಞರ ತಂಡ ಕರೆಯಿಸಿ ಆ ಮೊಸಳೆಯನ್ನು ಸ್ಥಳಾಂತಿರಿಸುವ ಪ್ರಯತ್ನ ನಡೆದಿದೆ.
ಸುರಕ್ಷತೆ ದೃಷ್ಠಿಯಿಂದ ಮೊಸಳೆ ಸ್ಥಳಾಂತರದವರೆಗೂ ಕೆರೆ ಹತ್ತಿರ ಹೋಗದಿರುವುದು ಒಳಿತು.