ಮುಂಡಗೋಡಿನ ಶಾಸಕರ ಮಾದರಿ ಶಾಲೆಯಲ್ಲಿ ಬಿಸಿಯೂಟ ಮಾಡಿ ಅಸ್ವಸ್ಥಗೊಂಡಿದ್ದ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿದೆ. ಅಸ್ವಸ್ಥಗೊಂಡಿದ್ದ 44 ಮಕ್ಕಳ ಪೈಕಿ 17 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
Advertisement. Scroll to continue reading.
ಶುಕ್ರವಾರ ಮಧ್ಯಾಹ್ನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 452 ವಿದ್ಯಾರ್ಥಿ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಯ 235 ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದರು. ಮೌಲಾನಾ ಆಜಾದ್ ಮಾದರಿ ಶಾಲೆಗೆ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದಲೇ ಬಿಸಿಯೂಟ ಸರಬರಾಜು ಮಾಡಲಾಗುತ್ತಿದ್ದು, ಮೌಲಾನಾ ಆಜಾದ್ ಮಾದರಿ ಶಾಲೆಯ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಶಾಸಕರ ಮಾದರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ತಕ್ಷಣ 24 ಮಕ್ಕಳು ಹೊಟ್ಟೆನೋವಿನಿಂದ ಬಳಲಿದ್ದರು. ಅವರೆಲ್ಲರೂ ವಾಂತಿ ಮಾಡಿಕೊಂಡಿದ್ದು, ಅದಾದ ನಂತರ ಮತ್ತೆ 20 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಊಟದ ಪರಿಶೀಲನೆ ಮಾಡಿದಾಗ ಸಾಂಬಾರಿನಲ್ಲಿ ಇಲಿ ಹಿಕ್ಕಿ ಕಾಣಿಸಿತ್ತು. ಆ ಎಲ್ಲಾ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರ ತಂಡ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು, ಮಕ್ಕಳ ಆರೋಗ್ಯದ ಮೇಲೆ ವಿಶೇಷ ಗಮನ ನೀಡಿತು. ಪರಿಣಾಮ 17 ವಿದ್ಯಾರ್ಥಿಗಳು ಅದೇ ದಿನ ಚೇತರಿಸಿಕೊಂಡು ಮನೆ ಮುಟ್ಟಿದರು. ಅಧಿಕಾರಿಗಳು ಮಕ್ಕಳು ಸೇವಿಸಿದ ಬಿಸಿಯೂಟವನ್ನು ಶಾಲೆಯಿಂದ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿದ್ದು, ವರದಿ ಬರುವುದು ಬಾಕಿಯಿದೆ. ಈ ನಡುವೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಡುಗೆ ಕೊಠಡಿ, ದಾಸ್ತಾನು ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಅವಘಡಕ್ಕೆ ಕಾರಣ ಕೇಳಿ ಶಾಲೆಯ ಮುಖ್ಯ ಶಿಕ್ಷಕರಿಗೆ ನೋಟಿಸ್ ಸಹ ನೀಡಲಾಗಿದೆ.