ಹoಚಿನ ಮನೆಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಮನೆ ಸುಟ್ಟು ಕರಕಲಾಗಿದ್ದು, ಮನೆಯೊಳಗೆ ಜೋಪಾನವಾಗಿರಿಸಿದ್ದ ಬಂಗಾರವು ಅಗ್ನಿಗೆ ಆಹುತಿಯಾಗಿದೆ. ವಾಸದ ಮನೆ ಜೊತೆ ಸಂಪಾದಿಸಿದ್ದ ಆಭರಣವನ್ನು ಕಳೆದುಕೊಂಡ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ.
Advertisement. Scroll to continue reading.
ಕಾರವಾರದ ಅಲಿಗದ್ದಾ ಬಳಿಯ ಗಾವಡವಾಡದಲ್ಲಿ ಶುಕ್ರವಾರ ಅಗ್ನಿ ಅವಘಡ ನಡೆದಿದೆ. ಈ ದುರಂತದಲ್ಲಿ ಮನೆಗೆ ಬೆಂಕಿ ಬಿದ್ದಿದ್ದು, ಮನೆಯೊಳಗಿದ್ದ ಸಾಮಗ್ರಿಗಳೆಲ್ಲವೂ ಕರಕಲಾಗಿದೆ. ಬಡವ ಭೀಮ ಗೌಡ ಅವರು ವಾಸಿಸುತ್ತಿದ್ದ ಮನೆಗೆ ದಿಡೀರ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಬಿದ್ದ ವೇಳೆ ಮನೆಗೆ ಬೀಗ ಹಾಕಲಾಗಿದ್ದು, ಒಳಗೆ ಯಾರೂ ಇಲ್ಲದ ಕಾರಣ ಎಲ್ಲರೂ ಬದುಕುಳಿದಿದ್ದಾರೆ.
ಬೆಂಕಿ ಕಿಡಿ ಸಣ್ಣದಾಗಿದ್ದಾಗ ಯಾರ ಗಮನಕ್ಕೂ ಬಂದಿರಲಿಲ್ಲ. ದೊಡ್ಡ ಹೊಗೆ ಕಾಣಿಸಿಕೊಂಡಾಗ ಸ್ಥಳೀಯರು ಇದನ್ನು ಗಮನಿಸಿದರು. ಬೀಗ ಒಡೆದು ಬೆಂಕಿ ಆರಿಸುವ ಪ್ರಯತ್ನ ನಡೆಸಿದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಪೈಪ್ ಮೂಲಕ ನೀರು ಹಾಯಿಸಿದರೂ ಬೆಂಕಿಯ ಜ್ವಾಲೆ ಕಡಿಮೆ ಆಗಲಿಲ್ಲ.
ಅಷ್ಟೊತ್ತಿಗೆ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಗೊತ್ತಾಯಿತು. ಅವರು ಬಂದು ಬೆಂಕಿ ಆರಿಸುವ ಕೆಲಸ ಶುರು ಮಾಡಿದರು. ಆದರೆ, ಅಷ್ಟರೊಳಗೆ ಮನೆ ಸುಟ್ಟು ಕರಕಲಾಗಿತ್ತು. ಅಡುಗೆ ಪಾತ್ರೆ, ವಿದ್ಯುತ್ ಉಪಕರಣಗಳ ಜೊತೆ ಕೂಡಿಟ್ಟ ಚಿನ್ನಾಭರಣವೂ ಕರಗಿತ್ತು. ವಿದ್ಯುತ್ ಶಾರ್ಟ ಸರ್ಕೀಟ್ ಅವಘಡಕ್ಕೆ ಕಾರಣ ಎಂಬ ಮಾಹಿತಿಯಿದೆ.