ತುರ್ತು ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ಸರ್ಕಾರ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸೆಟ್ಲೈಟ್ ಫೋನ್ ಕೊಟ್ಟಿದೆ. ಆದರೆ ಗುಡ್ಡ ಕುಸಿತ, ನೆರೆ ಪ್ರವಾಹದ ಸನ್ನಿವೇಶದಲ್ಲಿ ಸೆಟ್ಲೈಟ್ ಫೋನ್ ಪ್ರಯೋಜನಕ್ಕೆ ಬಂದಿಲ್ಲ. ಆ ಫೋನ್ ನಿರ್ವಹಣೆಗೆ ಮೀಸಲಿರುವ ಅನುದಾನವೂ ಸಾಲುತ್ತಿಲ್ಲ!
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ನ್ಯಾಶನಲ್ ಡಿಸಾಸ್ಟರ್ ಮ್ಯಾನೆಜಮೆಂಟ್ ಸರ್ವೀಸ್ (ಎನ್ಡಿಎಂಎಸ್) ಪೈಲೆಟ್ ಪ್ರೊಜೆಕ್ಟ್ ಯೋಜನೆ ಅಡಿ ಈ ಸಾಧನೆ ನೀಡಿದೆ. ಇಡೀ ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಮಾತ್ರ ಈ ಸೆಟ್ಲೈಟ್ ಫೋನ್ ಕೊಡಲಾಗಿದೆ. ಬಿಎಸ್ಎನ್ಎಲ್ ಸಹಯೋಗದಲ್ಲಿ ಈ ಫೋನ್ ಹಸ್ತಾಂತರಿಸಲಾಗಿದೆ. ನೈಸರ್ಗಿಕ ವಿಕೋಪ ಹಾಗೂ ಇನ್ನಿತರ ಅವಘಡದ ವೇಳೆ ಸೈಟ್ಲೈಟ್ ಫೋನ್ ಬಳಕೆ ಮಾಡುವಂತೆ ಸೂಚಿಸಲಾಗಿದ್ದು, ಅದರ ಬಳಕೆ ಮಾತ್ರ ಆ ಪ್ರಮಾಣದಲ್ಲಿ ನಡೆದಿಲ್ಲ. ಪ್ರವಾಹ, ಗುಡ್ಡ ಕುಸಿತ, ನೆರೆ ಪ್ರವಾಹ, ಭೂ ಕಂಪನ ಮೊದಲಾದ ಸನ್ನಿವೇಶದಲ್ಲಿಯೂ ಈ ಸೆಟ್ಲೈಟ್ ಫೋನಿನಿಂದ ಯಾವ ಪ್ರಯೋಜನವೂ ಆಗಿಲ್ಲ.
ಫೋನಿಗಿಂತಲೂ ಸಂಬಳ ದುಬಾರಿ!
25 ಸಾವಿರ ರೂ ಮೌಲ್ಯದ ಫೋನ್ ಜೊತೆ ಕಂಪ್ಯುಟರ್, ಲಾನ್ ಕೇಬಲ್ ಸೇರಿ 60 ಸಾವಿರ ರೂ ಮೌಲ್ಯದ ಸಾಮಗ್ರಿಗಳು 2017ರಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರವಾಗಿದೆ. ಈ ಫೋನ್ ನಿರ್ವಹಣೆಗಾಗಿ ಮೊದಲ ವರ್ಷ ಸರ್ಕಾರ 4 ಲಕ್ಷ ರೂ ಅನುದಾನವನ್ನು ಸಹ ನೀಡಿದೆ. ಅದರೊಂದಿಗೆ ಫೋನ್ ನಿರ್ವಹಣೆಗಾಗಿ ಪಿಲ್ಡ್ ಇಂಜಿನಿಯರ್ ಹುದ್ದೆಗೆ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಮೂಲಕ ಎಜನ್ಸಿಯೊಂದನ್ನು ಬಳಸಿಕೊಂಡು ಮೊದಲ ವರ್ಷ ಹೊರಗುತ್ತಿಗೆ ಆಧಾರದಲ್ಲಿ 10 ತಿಂಗಳ ಅವಧಿಗೆ ಸಿಬ್ಬಂದಿಯೊಬ್ಬರನ್ನು ನೇಮಿಸಿಸಲಾಗಿದ್ದು, ಅವರ ಸೇವೆ ಈಗಲೂ ಮುಂದುವರೆದಿದೆ. ಹಳೆ ಆದೇಶದ ಪ್ರಕಾರ ಪಿಲ್ಡ್ ಇಂಜಿನಿಯರ್’ಗೆ ಮಾಸಿಕ 25 ಸಾವಿರ ರೂ ವೇತನ ನಿಗದಿಪಡಿಸಲಾಗಿದೆ. ಜೊತೆಗೆ ಫೋನ್ ರೀಚಾರ್ಜ ಮಾಡಲು ಒಮ್ಮೆ ಖಾಸಗಿ ಕಂಪನಿಯೊ0ದಕ್ಕೆ 12981 ರೂ ಪಾವತಿಸಲಾಗಿದೆ.
ಬಿಲ್ ಪಾವತಿಗೂ ದುಡ್ಡಿಲ್ಲ!
2025ರ ಏಪ್ರಿಲ್ ಅವಧಿಯಲ್ಲಿ ಪರಿಶೀಲಿಸಿದಾಗ ಸೆಟ್ಲೈಟ್ ಫೋನ್ ನಿರ್ವಹಣೆಗಾಗಿ ಸರ್ಕಾರ ನೀಡಿದ ಎಲ್ಲಾ ಹಣವೂ ಖಾಲಿಯಾಗಿದೆ. ಈ ಎಲ್ಲದರ ನಡುವೆ ಕಳೆದ ಮೂರು ವರ್ಷಗಳಿಂದ ಸೆಟ್ಲೈಟ್ ಫೋನಿನ ಬಿಲ್ ಪಾವತಿ ಆಗದಿರುವುದು ಗಮನಕ್ಕೆ ಬಂದಿದೆ. ಬಿಲ್ ಪಾವತಿಸಲೂ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣದ ಕೊರತೆ ಕಾಣುತ್ತಿದ್ದು, ಸೆಟ್ಲೈಟ್ ಫೋನ್ ನಿರ್ವಹಣೆಯೂ ದುಬಾರಿಯಾಗಿದೆ. ಕಳೆದ ಮೂರು ವರ್ಷಗಳಿಂದ ಸೆಟ್ಲೈಟ್ ಫೋನ್ ಬಿಲ್ ಪಾವತಿ ಆಗದ ಬಗ್ಗೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ಅವಧಿಯಲ್ಲಿ ಬಿಎಸ್ಎನ್ಎಲ್ ಬಿಲ್ ಸಲ್ಲಿಕೆ ಮಾಡದಿರುವುದು ಗೊತ್ತಾಗಿದೆ.
ಹಣ ಖಾಲಿ ಆದ ನಂತರ 3 ವರ್ಷದಿಂದ ಬಿಲ್ ಬಾಕಿಯಿರುವುದು ಬಿಎಸ್ಎನ್ಎಲ್’ಗೆ ನೆನಪಿಗೆ ಬಂದಿದ್ದು, ಸೆಟ್ಲೈಟ್ ಫೋನ್ ಮುಂದಿನ ನಿರ್ವಹಣೆಗೆ ಹಣ ಅಗತ್ಯವಿರುವ ಬಗ್ಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು 2025ರ ಏಪ್ರಿಲ್ 16ರಂದು ವಿಪತ್ತು ನಿರ್ವಹಣೆ ವಿಭಾಗದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಹಣ ಕೊರತೆ ಇದೇ ಮೊದಲಲ್ಲ!
2020ರಲ್ಲಿಯೂ ಒಮ್ಮೆ ಸೆಟ್ಲೈಟ್ ಫೋನ್ ಬಿಲ್ ಬಾಕಿಗೆ ಹಣವಿರಲಿಲ್ಲ. ಆಗ, 148937ರೂ ಬಿಲ್ ಬಾಕಿ ಪಾವತಿಸುವಂತೆ ಬಿಎಸ್ಎನ್ಎಲ್ ಪತ್ರ ಬರೆದಿದ್ದು, ಈ ಹಣ ಪಾವತಿಗೆ ಹಣವಿಲ್ಲದ ಕಾರಣ ಸಿಬ್ಬಂದಿ ವೇತನ ಬಳಕೆ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿರುವ ಎಲ್ಲಾ ಹಣ ಬಳಸಿದ ನಂತರವೂ 4055ರೂ ಹಣ ಕಡಿಮೆ ಬಿದ್ದಿದ್ದರಿಂದ ಸೆಟ್ಲೈಟ್ ಫೋನ್ ನಿರ್ವಹಣೆಯ ಪಿಲ್ಡ್ ಇಂಜಿನಿಯರ್ ವೇತನಕ್ಕೆ ಬಿಡುಗಡೆಯಾದ ಹಣದಿಂದ ಈ ಬಿಲ್ ಪಾವತಿಸಲು ಸರ್ಕಾರ ಸೂಚಿಸಿತ್ತು. 2020ರಲ್ಲಿ ಸಿಬ್ಬಂದಿ ವೇತನದ ಹಣದಿಂದ ಸೆಟ್ಲೈಟ್ ಫೋನ್ ಬಿಲ್ ಪಾವತಿಸಲು ಆದೇಶವಾಗಿತ್ತು.
ಈ ಎಲ್ಲದರ ನಡುವೆ ಇದೀಗ ಮತ್ತೆ ಸೆಟ್ಲೈಟ್ ಫೋನ್ ನಿರ್ವಹಣೆಗೆ ಹಣವಿಲ್ಲದ ಹಾಗಾಗಿದ್ದು, ಮುಂದಿನ ನಿರ್ವಹಣೆಗಾಗಿ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ರವಾನೆಯಾಗಿದೆ. ಆ ಪತ್ರದ ಅನ್ವಯ ಸರ್ಕಾರ ಅನುದಾನ ನೀಡಿದ್ದು, ಬಿಲ್ ಪಾವತಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿಪಡೆದ ದಾಖಲೆಗಳಿಂದ ಈ ಎಲ್ಲಾ ಅಂಶಗಳು ಗೊತ್ತಾಗಿದೆ.