ಹೊನ್ನಾವರದ ವಿಶಾಲ ಮೇಸ್ತಾ ಅವರು ಗೋಕರ್ಣದ ಮಂಜುನಾಥ ಗೌಡ ಅವರಿಗೆ 2 ಸಾವಿರ ರೂ ಮೌಲ್ಯದ ಗಾಂಜಾ ಸರಬರಾಜು ಮಾಡಿದ್ದಾರೆ. ಆ 60 ಗ್ರಾಂ ಗಾಂಜಾ ಮಾರಾಟ ಮಾಡಿ ಕಾಸು ಸಂಪಾದಿಸುವ ದಾರಿ ಹೇಳಿಕೊಟ್ಟಿದ್ದಾರೆ. ಆದರೆ, ಗಾಂಜಾ ಮಾರಾಟ ಮಾಡುವ ವೇಳೆ ಮಂಜುನಾಥ ಗೌಡ ಅವರು ಪಿಐ ಶ್ರೀಧರ್ ಎಸ್ ಆರ್ ಅವರಿಗೆ ಸಿಕ್ಕಿಬಿದ್ದಿದ್ದಾರೆ!
ಗೋಕರ್ಣದ ಶಶಿಹಿತ್ತಲ ಮಂಜುನಾಥ ವೆಂಕಟ ಗೌಡ ಅವರು ಗೌಂಡಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಬಹುಬೇಗ ದುಡ್ಡು ಮಾಡಬೇಕು ಎಂಬ ಯೋಚನೆ ಬಂದಿತು. ಹೀಗಾಗಿ ಅವರು ಅಡ್ಡದಾರಿ ಹಿಡಿಯಲು ನಿರ್ಧರಿಸಿದರು. ಆಗ, ಹೊನ್ನಾವರದ ಕಾಸರಕೋಡಿನ ವಿಶಾಲ ಮೇಸ್ತಾ ಅವರು ಗಾಂಜಾ ವ್ಯಾಪಾರದ ಗುಟ್ಟು ಹೇಳಿದರು. ವಿಶಾಲ ಮೇಸ್ತಾ ಅವರೇ 2 ಸಾವಿರ ರೂ ಹಣಪಡೆದು ಗಾಂಜಾ ತಂದುಕೊಟ್ಟರು.
ಗೌoಡಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಗೌಡ ಅವರಿಗೆ ವ್ಯಾಪಾರಿತನದ ಚಾಣಾಕ್ಷತನ ಇರಲಿಲ್ಲ. ಅದಾಗಿಯೂ ಅವರು ನವೆಂಬರ್ 3ರಂದು ಗೋಕರ್ಣ ಬೇಲೆಹಿತ್ಲೆಯಲ್ಲಿರುವ ಹೊಸ ಮೀನು ಮಾರುಕಟ್ಟೆ ಬಳಿ ಗಾಂಜಾ ಮಾರಾಟಕ್ಕೆ ನಿಂತಿದ್ದರು. ಮೀನು ಖರೀದಿಸಲು ಬಂದವರಿಗೆಲ್ಲ ಗಾಂಜಾ ಸೊಪ್ಪಿನ ಮಹತ್ವ ಹೇಳುತ್ತಿದ್ದರು. ಮಾದಕ ವಸ್ತು ಮಾರಾಟ ಕಾನೂನುಬಾಹಿರ ಎಂಬ ಅರಿವಿದ್ದರೂ ದುಡ್ಡಿನ ಆಸೆಗಾಗಿ ಅವರು ಆ ದಾರಿ ಆಯ್ದುಕೊಂಡಿದ್ದರು.
ಗೋಕರ್ಣ ಪಿಐ ಶ್ರೀಧರ್ ಎಸ್ ಆರ್ ಅವರು ಬೇಲೆಹಿತ್ತಲಿನ ಕಡಲಿನ ಬಳಿ ಹೋಗಿದ್ದರು. ಆ ವೇಳೆ ಗಾಂಜಾ ಹಿಡಿದು ನಿಂತಿದ್ದ ಮಂಜುನಾಥ ಗೌಡ ಅವರು ಕಾಣಿಸಿದರು. ಅವರನ್ನು ಮಾತನಾಡಿಸಿದಾಗ ಗಾಂಜಾ ವ್ಯಾಪಾರ ದೃಢವಾಯಿತು. ಗಾಂಜಾ ಪೂರೈಸಿದ ವ್ಯಕ್ತಿಯ ಹೆಸರು ಬಹಿರಂಗವಾಯಿತು. ಈ ಹಿನ್ನಲೆ ಹೊನ್ನಾವರದ ವಿಶಾಲ ಮೇಸ್ತಾ ಅವರು ಗೋಕರ್ಣದ ಮಂಜುನಾಥ ಗೌಡ ಅವರಿಬ್ಬರ ಹೆಸರನ್ನು ದಾಖಲಿಸಿ ಪೊಲೀಸರು ಪ್ರಕರಣ ದಾಖಲಿಸಿದರು.