ಮರಗಳ ಮಾರಣಹೋಮ ನಡೆಸಿದಕ್ಕಾಗಿ ಶಿರಸಿಯ ಜೆಡಿಎಸ್ ಮುಖಂಡ ಉಪೇಂದ್ರ ಪೈ ಅವರ ಬಂಧನವಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. `ಮೊಬೈಲ್ ಮಿಡಿಯಾ ನೆಟ್ವರ್ಕ ಜೊತೆ ಮಾತನಾಡಿದ ಅವರು `ಬಂಧನವೂ ಆಗಿಲ್ಲ. ಬಿಡುಗಡೆಯೂ ಆಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಶಿರಸಿಯ ಇಟಗುಳಿಯಲ್ಲಿ ಉಪೇಂದ್ರ ಪೈ ಅವರು ಭೂಮಿ ಹೊಂದಿದ್ದಾರೆ. ಅವರ ಭೂಮಿಯಲ್ಲಿ ಅಕೆಶಿಯಾ ಮರ ಬೆಳೆದಿದ್ದು, ಗಾಳಿ-ಮಳೆಗೆ ಸಿಲುಕಿ ಅವು ವಿದ್ಯುತ್ ತಂತಿ ಮೇಲೆ ಮುರಿದು ಬೀಳುತ್ತಿವೆ. ಹೀಗಾಗಿ ನಾಲ್ಕು ವರ್ಷದ ಹಿಂದೆಯೇ ಉಪೇಂದ್ರ ಪೈ ಅವರು ಆ ಮರಗಳ ಕಟಾವಿಗೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಮರ ಕಟಾವಿಗೆ ಅರಣ್ಯ ಇಲಾಖೆ ಮಾರ್ಕಿಂಗ್ ಮಾಡಿದ್ದು ಕಟಾವು ಪ್ರಕ್ರಿಯೆ ಮಾತ್ರ ನಡೆದಿರಲಿಲ್ಲ.
ಹೀಗಿರುವಾಗ ಅಲ್ಲಿದ್ದ ಕೊಟ್ಟಿಗೆ ಹಾಗೂ ವಿದ್ಯುತ್ ತಂತಿಗಳ ಸುರಕ್ಷತೆ ದೃಷ್ಠಿಯಿಂದ ಅಪಾಯಕಾರಿ ರೀತಿಯಲ್ಲಿದ್ದ ಮರಗಳನ್ನು ಉಪೇಂದ್ರ ಪೈ ಅವರು ಕಟಾವು ಮಾಡಿದ್ದಾರೆ. ಕಟಾವು ಮಾಡಿದ ಮರಗಳು ಜಾಗದಲ್ಲಿಯೇ ಬಿದ್ದಿದ್ದು, ಸಾರ್ವಜನಿಕರೊಬ್ಬರ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ಅದನ್ನು ಪರಿಶೀಲಿಸಿದ್ದಾರೆ. ಅನುಮತಿ ಇಲ್ಲದೇ ಮರ ಕಟಾವು ಮಾಡಿದ ಕಾರಣ ಅಲ್ಲಿ ಕೆಲಸ ಮಾಡುವ ಕಾರ್ಮಿಕನ ಮೇಲೆ ಪ್ರಕರಣ ದಾಖಲಿಸುವುದಾಗಿಯೂ ಹೇಳಿದ್ದಾರೆ.
ಆಗ, ಉಪೇಂದ್ ಪೈ ಅವರು ಅಪಾಯಕಾರಿ ಮರಗಳಿಂದ ಆಗಬಹುದಾದ ಅನಾಹುತಗಳ ಬಗ್ಗೆ ಅರಣ್ಯಾಧಿಕಾರಿಗಳಿಗೆ ವಿವರಿಸಿದ್ದಾರೆ. ಈ ಹಿಂದೆ ನೀಡಿದ ಅರ್ಜಿ, ಮಾರ್ಕಿಂಗ್ ನಡೆದ ದಾಖಲೆಗಳನ್ನು ಕಾಣಿಸಿದ್ದಾರೆ. ಅದಾಗಿಯೂ ಅನುಮತಿ ಇಲ್ಲದೇ ಮರ ಕಟಾವು ಮಾಡಿದ ಕಾರಣ 20 ಸಾವಿರ ರೂ ದಂಡ ಪಾವತಿಸುವಂತೆ ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಉಪೇಂದ್ರ ಪೈ ಅವರು ಸಹ ಒಪ್ಪಿಗೆ ನೀಡಿದ್ದು, ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ.
`ಕಾರ್ಮಿಕನ ಮೇಲೆ ಪ್ರಕರಣ ದಾಖಲಿಸುವ ಬದಲು ಜಾಗದ ಮೇಲಿನ ಮಾಲಕನಾದ ನನ್ನ ಮೇಲೆ ಕೇಸ್ ದಾಖಲಿಸಿ’ ಎಂದು ಅವರು ಹೇಳಿದ್ದಾರೆ. `ಹಣ ಪಾವತಿ ನಂತರ ಸ್ಥಳದಲ್ಲಿದ್ದ ಎಲ್ಲಾ ಅಪಾಯಕಾರಿ ಮರಗಳನ್ನು ನಿಯಮಾನುಸಾರ ಕಟಾವು ಮಾಡಬೇಕು. ಜೊತೆಗೆ ಅದನ್ನು ಅಲ್ಲಿಂದ ಸ್ಥಳಾಂತರಿಸಬೇಕು’ ಎಂದು ತಾಕೀತು ಮಾಡಿದ್ದಾರೆ. ಅದಾದ ನಂತರ ಉಪೇಂದ್ರ ಪೈ ಅವರು ಜೆಡಿಎಸ್ ಪಕ್ಷದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಹೋಗಿದ್ದು, `ಉಪೇಂದ್ರ ಪೈ ಅವರ ಬಂಧನ-ಬಿಡುಗಡೆ’ ಸುದ್ದಿ ಹರಿದಾಡಿದೆ. ಇದಕ್ಕೆ ಅವರು ಜಾಲತಾಣದ ಮೂಲಕ ಸ್ಪಷ್ಠನೆ ನೀಡಿದ್ದು, ನಡೆದ ಘಟನಾವಳಿಗಳ ಬಗ್ಗೆ ಮೊಬೈಲ್ ಮಿಡಿಯಾ ನೆಟ್ವರ್ಕಗೂ ವಿವರಿಸಿದ್ದಾರೆ.