ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಐಟಿ ಉದ್ಯೋಗಿ ಮಹಮ್ಮದ್ ಇಮ್ರಾನ್ ಸಮುದ್ರಕ್ಕೆ ಬಿದ್ದು ಶವವಾಗಿದ್ದು, ಅವರ ಮೂವರು ಸ್ನೇಹಿತರು ಗಾಂಜಾ ಗುಂಗಿನಲ್ಲಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
Advertisement. Scroll to continue reading.
ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಆರು ಜನ ಸೋಮವಾರ ಗೋಕರ್ಣಕ್ಕೆ ಬಂದಿದ್ದರು. ಗೋಕರ್ಣಕ್ಕೆ ಬರುವ ಮುನ್ನ ಅವರೆಲ್ಲರೂ ಗೋವಾ ಪ್ರವೇಶಿಸಿದ್ದು, ಅಲ್ಲಿ ಮೋಜು-ಮಸ್ತಿ ಮಾಡಿದ್ದರು. ಆರು ಜನರಲ್ಲಿ ಮೂವರು ಗಾಂಜಾ ಸೇವಿಸಿದ್ದರು. ಮೋಟು ಬೀಡಿಯಲ್ಲಿ ಗಾಂಜಾ ಪುಡಿ ಹಾಕಿ ಅವರೆಲ್ಲರೂ ಗಾಳಿ ಹೊಡೆದಿದ್ದರು. ಅದಾದ ನಂತರ ಗೋವಾದಿಂದ ಗೋಕರ್ಣ ಪ್ರವಾಸ ಮಾಡಿದ್ದರು.
ಸೋಮವಾರ ಸಂಜೆ ಅರಬ್ಬಿ ಸಮುದ್ರಕ್ಕೆ ಇಳಿದು ಆಟವಾಡುವಾಗ ಆಂದ್ರಪ್ರದೇಶದ ಮಹಮ್ಮದ್ ಇಮ್ರಾನ್ ಅಲೆಗಳ ಅಬ್ಬರಕ್ಕೆ ಸಿಲುಕಿದರು. ನೀರಿನ ಆಳಕ್ಕೆ ಹೋಗಿ ಅವರು ಅಲ್ಲಿಯೇ ಸಾವನಪ್ಪಿದರು. ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತರಲಾಗಿದ್ದು, ಆ ಅವಧಿಯಲ್ಲಿ ಗಾಂಜಾ ನಶೆಯಲ್ಲಿದ್ದ ಅವರ ಮೂವರು ಸ್ನೇಹಿತರು ಸಿಕ್ಕಿ ಬಿದ್ದರು.
ಆಂದ್ರ ಪ್ರದೇಶದ ಭಾನು ಕಿರಣ (24), ಬೆಂಗಳೂರಿನ ಧನುಷ್ ಕೆ (25) ಹಾಗೂ ವಿಜಯಪುರದ ಸೋಮೇಶ ಜೋಗೂರ್ (26) ಅವರನ್ನು ಪೊಲೀಸರು ಅಲ್ಲಿಯೇ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಆಗ ಆ ಮೂವರು ಗಾಂಜಾ ಸೇವಿಸಿರುವುದು ಗೊತ್ತಾಯಿತು.
ಗೋವಾದಲ್ಲಿ ಗಾಂಜಾ ಖರೀದಿಸಿ ಅದನ್ನು ಸೇವಿಸಿರುವ ಬಗ್ಗೆ ಅವರೆಲ್ಲರೂ ಒಪ್ಪಿಕೊಂಡರು. ಸಾವನಪ್ಪಿದ ಮಹಮ್ಮದ್ ಇಮ್ರಾನ್ ನಶೆಯಲ್ಲಿರಲಿಲ್ಲ. ಜೊತೆಗೆ ಇನ್ನಿಬ್ಬರು ಸ್ನೇಹಿತರು ದುಶ್ಚಟದಿಂದ ದೂರವಿದ್ದು, ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದರು. ಗಾಂಜಾ ಸೇವಿಸಿದ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಿದರು.