ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಸನ್ಮಾನಿಸಿದ ಕಾರಣ 10 ವರ್ಷ ಕೋರ್ಟು-ಕೇಸು ಎಂದು ಅಲೆದಾಡಿದ್ದ ರಾಘು ನಾಯ್ಕ ಅವರು ಇದೀಗ ನಿರಾಳರಾಗಿದ್ದಾರೆ. `ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿದ್ದು ಅಪರಾಧ ಅಲ್ಲ’ ಎಂದು ನ್ಯಾಯಾಲಯ ಹೇಳಿದೆ!
ಶಿವರಾಮ ಹೆಬ್ಬಾರ್ ಅವರ ಅಭಿಮಾನಿಯಾಗಿರುವ ಗುಡ್ನಾಪುರ ಗ್ರಾಮದ ರಾಘು ನಾಯ್ಕ ಅವರು ಬನವಾಸಿ ಭಾಗದ ಗ್ರಾಮ ಪಂಚಾಯತ ಸದಸ್ಯರಾಗಿದ್ದರು. 2015ರ ಫೆಬ್ರವರಿ 8ರಂದು ಬನವಾಸಿಯಲ್ಲಿ ನಡೆದ ಕದಂಬ ಉತ್ಸವದಲ್ಲಿ ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿದ್ದರು. ವಿವಿಧ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿದ್ದ ವೇದಿಕೆಯಲ್ಲಿ ತಹಶೀಲ್ದಾರರೇ ಗಣ್ಯರನ್ನು ಸನ್ಮಾನಿಸಲು ಉದ್ದೇಶಿಸಿದ್ದು, ಆ ಅವಕಾಶ ತಪ್ಪಿದ ಹಿನ್ನಲೆ ರಾಘು ನಾಯ್ಕ ವಿರುದ್ಧ ತಹಶೀಲ್ದಾರ್ ಬಸಪ್ಪ ಪೂಜಾರಿ ಅವರು ಗರಂ ಆಗಿದ್ದರು.
ಕದಂಬ ಉತ್ಸವ ಕಾರ್ಯಕ್ರಮ ಮುಗಿದ ನಂತರ ಅನುಮತಿ ಇಲ್ಲದೇ ಸರ್ಕಾರಿ ಕಾರ್ಯಕ್ರಮದ ವೇದಿಕೆ ಪ್ರವೇಶಿಸಿ ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿದ ನೆಪವಿರಿಸಿ ರಾಘು ನಾಯ್ಕ ಅವರ ವಿರುದ್ಧ ತಹಶೀಲ್ದಾರ್ ಬಸಪ್ಪ ಪೂಜಾರಿ ಪ್ರಕರಣ ದಾಖಲಿಸಿದ್ದರು. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿದ ಬಗ್ಗೆ ಪೊಲೀಸ್ ಪ್ರಕರಣದಲ್ಲಿ ತಹಶೀಲ್ದಾರ್ ಬಸಪ್ಪ ಪೂಜಾರಿ ಅವರು ದೂರಿದ್ದರು. 10 ವರ್ಷಗಳ ಕಾಲ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿದ ಕಾರಣ ರಾಘು ನಾಯ್ಕ ಅವರು ಕೋರ್ಟು-ಕಚೇರಿ ಅಲೆದಾಟ ಮಾಡಿದರು.
ರಾಘು ನಾಯ್ಕ ಅವರು ವೇದಿಕೆಯಲ್ಲಿ ಭಾಷಣ ಮಾಡಿದ ವಿಡಿಯೋ, ಸನ್ಮಾನಿಸಿದ ತುಣುಕುಗಳನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ, ಅವರು ತಪ್ಪು ಮಾಡಿದ್ದಾರೆ ಎಂದು ಸಾಭೀತುಪಡಿಸುವಲ್ಲಿ ಅವರು ವಿಫಲರಾದರು. ಈ ಹಿನ್ನಲೆ ಶಿರಸಿ 1ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಅಲ್ತಾಫ್ ಹುಸೇನ್ ಸಾಬ ಅವರು ಮಂಗಳವಾರ ರಾಘು ನಾಯ್ಕ ಅವರನ್ನು ನಿರ್ದೋಶಿ ಎಂದು ಘೋಷಿಸಿದರು. ರಾಘು ನಾಯ್ಕ ಅವರ ಪರವಾಗಿ ಹಿರಿಯ ವಕೀಲ ರವೀಂದ್ರ ನಾಯ್ಕ ಮತ್ತು ಉದಯ ನಾಯ್ಕ ವಾದಿಸಿದ್ದರು. ಸುರೇಖಾ ನಾಯ್ಕ, ಹಾಗೂ ದಿವ್ಯಾ ನಾಯ್ಕ ಅವರು ವಿವಿಧ ಸಾಕ್ಷಿ ಸಂಗ್ರಹಿಸಿ ಸಹಕರಿಸಿದ್ದರು.