ಕಾಂತಾರಾ ಸಿನಿಮಾ ನೋಡಲು ಹೊನ್ನಾವರಕ್ಕೆ ಬಂದಿದ್ದ ಎಂಟು ಜನ ಟಾಕೀಸಿನ ಶೌಚಾಲಯದ ಬಳಿ ಗುಪ್ತ ಸಭೆ ನಡೆಸಿದ್ದು, ಇದನ್ನು ಪ್ರಶ್ನಿಸಿದ ಕಾರಣ ಅಲ್ಲಿನ ಕ್ಯಾಂಟಿನ್ ಸಿಬ್ಬಂದಿ ಪೆಟ್ಟು ತಿಂದಿದ್ದಾರೆ. ಆ ಎಂಟು ಜನ ಸೇರಿ ರಾಜು ಸಾವಂತ ಅವರ ಮೇಲೆ ಕೈ ಮಾಡಿದ್ದರಿಂದ ಪೊಲೀಸರು ಇದೀಗ ಆ ಅಪರಿಚಿತರ ಶೋಧ ಶುರು ಮಾಡಿದ್ದಾರೆ.
ಗೋಕರ್ಣ ಬಂಕಿಕೊಡ್ಲದ ರಾಜು ಉಲ್ಲಾಸ ಸಾವಂತ (40) ಅವರು ಹೊನ್ನಾವರದ ಪದ್ಮಾಂಜಲಿ ಟಾಕೀಸಿನಲ್ಲಿ ವಾಸವಿರುತ್ತಾರೆ. ಅವರು ಅಲ್ಲಿ ಕ್ಯಾಂಟಿನ್ ಕೆಲಸ ನಿರ್ವಹಿಸುತ್ತಿದ್ದಾರೆ. ಅಕ್ಟೊಬರ್ ಅವಧಿಯಲ್ಲಿ ಪದ್ಮಾಂಜಲಿ ಟಾಕೀಸಿನಲ್ಲಿ ಕಾಂತಾರಾ ಸಿನಿಮಾ ಪ್ರದರ್ಶನ ನಡೆಯುತ್ತಿದ್ದು, ಆ ತಿಂಗಳ 21ರ ರಾತ್ರಿ ಶೋ ನೋಡಲು 8 ಜನ ಬಂದಿದ್ದರು. ಅವರೆಲ್ಲರೂ ಬಾಲ್ಕನಿ ಟಿಕೆಟ್‌ಪಡೆದು ಟಾಕೀಸಿನ ಒಳ ಹೊಕ್ಕಿದ್ದರು.
ಆದರೆ, ಟಾಕೀಸಿನಲ್ಲಿ ಸಿನಿಮಾ ನೋಡುವ ಬದಲು ಅವರೆಲ್ಲರೂ ಶೌಚಾಲಯ ಸೇರಿದ್ದರು. ಶೌಚಾಲಯದ ಬಾಗಿಲು ಹಾಕಿಕೊಂಡು ಅವರೆಲ್ಲರೂ ಏನೋ ಮಾಡುತ್ತಿದ್ದರು. ರಾತ್ರಿ 10.30ರ ಅವಧಿಗೆ ಸಿನಿಮಾಗೆ ಮಧ್ಯಂತರ ವಿರಾಮ ನೀಡಲಾಯಿತು. ಆಗ, ರಾಜು ಸಾವಂತ ಅವರು ಜನರ ಅನುಕೂಲಕ್ಕಾಗಿ ಶೌಚಾಲಯದ ಬಾಗಿಲು ತೆರೆಯಲು ಪ್ರಯತ್ನಿಸಿದರು. ಆದರೆ, ಅಲ್ಲಿದ್ದ 8 ಜನ ಇದಕ್ಕೆ ಅವಕಾಶ ಕೊಡಲಿಲ್ಲ.
`ಯಾಕೆ ಬಾಗಿಲು ತೆರೆಯುವೆ?’ ಎಂದು ಅಲ್ಲಿದ್ದವರು ಪ್ರಶ್ನಿಸಿದರು. ರಾಜು ಸಾವಂತ ಅವರು ಸಮಜಾಯಿಶಿ ನೋಡುವುದರೊಳಗೆ ಅಲ್ಲಿದ್ದ ಜನ ದಾಳಿ ಮಾಡಿದರು. ಶೌಚಾಲಯದ ಗಾಜು ಒಡೆದು ಹಾನಿ ಮಾಡಿದರು. ಅವರೆಲ್ಲರೂ ನಶೆಯಲ್ಲಿದ್ದ ಅನುಮಾನವಿದ್ದು, ಪೆಟ್ಟು ತಿಂದ ರಾಜು ಸಾವಂತ ಅವರು ಪೊಲೀಸ್ ಠಾಣೆಗೆ ತೆರಳಿ ಎಲ್ಲಾ ವಿದ್ಯಮಾನ ವಿವರಿಸಿದರು. ಅದಾದ ನಂತರ ನ್ಯಾಯಾಲಕ್ಕೆ ಹೋಗಿ ನ್ಯಾಯಾಧೀಶರಿಗೂ ವಿಷಯ ಮನದಟ್ಟು ಮಾಡಿದರು.
ನ್ಯಾಯಾಧೀಶರ ಸೂಚನೆ ಮೇರಗೆ ಪೊಲೀಸರು ಪ್ರಕರಣ ದಾಖಲಿಸಿದರು. ಆ ಎಂಟು ಜನರ ಬಗ್ಗೆ ಈವರೆಗೂ ಸುಳಿವು ಸಿಕ್ಕಿಲ್ಲ. ಆದರೆ, `ಅವರನ್ನು ಮತ್ತೆ ನೋಡಿದರೆ ಖಂಡಿತ ಗುರುತಿಸುವೆ’ ಎಂದು ರಾಜು ಸಾವಂತ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆ ಆ ದಿನ ಸಿನಿಮಾ ನೋಡಲು ಹೋದವರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.