ಭೂ ವ್ಯಾಜ್ಯದ ವಿಷಯವಾಗಿ ಐದು ಜನರ ಗುಂಪೊoದು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದೆ. ಈ ಗಲಾಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆದಿದೆ.
ಭಟ್ಕಳ ಭದ್ರಿಯಾ ಕಾಲೋನಿಯ ಚಾಲಕ ಇರ್ಫಾನ್ ಅಹ್ಮದ್ ಮೆಹಬೂಬ್ ಸಾಬ ಸಯ್ಯದ್ ಅವರ ಮೇಲೆ ಐವರು ಆಕ್ರಮಣ ನಡೆಸಿದ್ದಾರೆ. ನವೆಂಬರ್ 23ರ ಸಂಜೆ ಈ ಗಲಾಟೆ ನಡೆದಿದೆ. ಇರ್ಫಾನ್ ಅವರು ತಮ್ಮದೇ ಊರಿನ ತಿಮ್ಮಪ್ಪ ಕರಿಯಾ ಅವರ ಜೊತೆಗೂಡಿ ಕೆಲಸ ಮಾಡುವಾಗ ಅಲ್ಲಿಗೆ ಬಂದ ಐವರು ಗಲಾಟೆ ಶುರು ಮಾಡಿದ್ದಾರೆ. ಆ ಗಲಾಟೆ ಅತಿರೇಖಕ್ಕೆ ಹೋಗಿ, ಹೊಡೆದಾಟದ ಸ್ವರೂಪಪಡೆದಿದೆ.
ಆಜಾದ್ ನಗರದ ಅಬ್ದುಲ್ ಬದಿ ಹುಸೇನ್ ಖತಿಬ್ ಆಗಮಿಸಿ `ಈ ಜಾಗ ನನ್ನದು’ ಎಂದು ಮೊದಲು ಹೇಳಿದ್ದಾರೆ. ಅದನ್ನು ಅಲ್ಲಗಳೆದಾಗ `ದಾಖಲೆ ತೋರಿಸಿ’ ಎಂದಿದ್ದಾರೆ. ತಿಮ್ಮಪ್ಪ ಕರಿಯಾ ಅವರು ದಾಖಲೆ ತೋರಿಸಿದಾಗ ಆಜಾದ್ ನಗರದ ಅರ್ಫಾದ್ ಅವರು ಆ `ದಾಖಲೆ ಯಾವುದು ಸರಿಯಿಲ್ಲ’ ಎಂದು ಹೇಳಿದ್ದಾರೆ.
ಈ ವೇಳೆ ಇರ್ಫಾನ್ ಅವರು ಮದ್ಯ ಪ್ರವೇಶಿಸಿ `ತಿಮ್ಮಪ್ಪನಿಗೆ ಆರೋಗ್ಯ ಸರಿಯಿಲ್ಲ. ಗಲಾಟೆ ಮಾಡಬೇಡಿ’ ಎಂದಾಗ ಹೊಡೆದಾಟ ಶುರುವಾಗಿದೆ. ಅಬ್ದುಲ್ ಬದಿ ಹುಸೇನ್ ಖತಿಬ್ ಅವರು ಇರ್ಫಾನ್ ಅವರಿಗೆ ಕಬ್ಬಿಣದ ರಾಡಿನಲ್ಲಿ ಹೊಡೆದಿದ್ದಾರೆ. ಜೊತೆಗೆ ಕೆ ಎಚ್ ಬಿ ಕಾಲೋನಿಯ ಇರ್ಷಾದ್ ಮಯುದ್ದೀನ್ ಸಿದ್ದಿಕ್ ಜೊತೆ ಮತ್ತೆ ಮೂವರು ಹಿಡಿದು ಥಳಿಸಿದ್ದಾರೆ. ಅಲ್ಲಿದ್ದ ಸದ್ದಾಂ ಇನ್ನಿತರರು ಈ ದಾಳಿ ತಪ್ಪಿಸುವ ಪ್ರಯತ್ನ ಮಾಡಿದ್ದು, ನೊಂದ ಇರ್ಫಾನ್ ಭಟ್ಕಳ ಪೊಲೀಸರಿಗೆ ದೂರಿದ್ದಾರೆ.