ಶಿರಸಿ-ಹುಬ್ಬಳ್ಳಿ ರಸ್ತೆ ಅಂಚಿನಲ್ಲಿದ್ದ ಲಾರಿಯೊಂದು ಕಳ್ಳತನವಾಗಿದೆ. ಲಾರಿ ಕದ್ದ ಕಳ್ಳ ಅದೇ ಜಾಗದಲ್ಲಿ ಸ್ಕೂಟರ್ ಬಿಟ್ಟು ಹೋಗಿದ್ದಾರೆ!
ಶಿರಸಿಯ ಚಿಪಗಿ ಮಹಾಲಕ್ಷ್ಮಿ ಸಾಮಿಲ್ ಬಳಿಯ ಕಾರ್ತಿಕ ಗುಡೇದ ಅವರು ಲಾರಿಯೊಂದನ್ನು ಖರೀದಿಸಿದ್ದರು. ಆ ಲಾರಿಗೆ ಅವರೇ ಮಾಲಕರಾಗಿದ್ದು, ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು. ನವೆಂಬರ್ 2ರಂದು ಅವರು ಶಿರಸಿ-ಹುಬ್ಬಳ್ಳಿ ರಸ್ತೆ ಅಂಚಿನಲ್ಲಿ ತಮ್ಮ ಲಾರಿ ನಿಲ್ಲಿಸಿದ್ದರು. ಅಲ್ಲಿರುವ ಮನೆಯೊಳಗೆ ಅವರು ಮಲಗಿದ್ದರು. ನವೆಂಬರ್ 3ರ ಬೆಳಗ್ಗೆ ಎದ್ದು ನೋಡಿದಾಗ ಅಲ್ಲಿ ಅವರ ಲಾರಿ ಕಾಣಲಿಲ್ಲ.
ಅಶೋಕ ಲೈಲಾಂಡ್ ದೋಸ್ತ್ ಮಾದರಿ ಲಾರಿಯನ್ನು ಅವರು ಎಲ್ಲಾ ಕಡೆ ಹುಡುಕಿದರು. ಆದರೂ, ಆ ಲಾರಿ ಸಿಗಲಿಲ್ಲ. ಲಾರಿ ನಿಲ್ಲಿಸಿದ ಜಾಗದಲ್ಲಿ ನೋಂದಣಿ ಸಂಖ್ಯೆಯೇ ಇಲ್ಲದ ಸ್ಕೂಟರ್ ನಿಂತಿರುವುದು ಅವರಿಗೆ ಕಾಣಿಸಿತು. ಲಾರಿ ಕದ್ದ ಕಳ್ಳನೇ ಈ ಸ್ಕೂಟರ್ ನಿಲ್ಲಿಸಿರುವ ಬಗ್ಗೆ ಅವರಿಗೆ ದೃಢವಾಯಿತು.
ಈ ಎಲ್ಲಾ ಹಿನ್ನಲೆ ಅವರು ಶಿರಸಿ ಗ್ರಾಮೀಣ ಠಾಣೆ ಪೊಲೀಸರನ್ನು ಭೇಟಿ ಮಾಡಿದರು. ಲಾರಿ ಕಳ್ಳತನ ಹಾಗೂ ಸ್ಕೂಟರ್ ಕಥೆ ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.