ಮಹಾರಾಷ್ಟ್ರದ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಮಾಂಗಲ್ಯದ ಸರವನ್ನು ಗೋಕರ್ಣ ಪೊಲೀಸರು ಅವರಿಗೆ ಮರಳಿಸಿದ್ದಾರೆ. ಮಾಂಗಲ್ಯಪಡೆದ ಮಹಿಳೆ ಪೊಲೀಸರ ಪ್ರಾಮಾಣಿಕ ನಡತೆಯನ್ನು ಶ್ಲಾಘಿಸಿದ್ದಾರೆ
ಮಹಾರಾಷ್ಟ್ರ ಕೊಲ್ಲಾಪುರದ ಸ್ವರ ಶುಭಂ ಕಾಪಸೆ ಅವರು ಕುಟುಂಬದ ಜೊತೆ ಗೋಕರ್ಣಕ್ಕೆ ಬಂದಿದ್ದರು. ಮುಖ್ಯ ಕಡಲ ತೀರಕ್ಕೆ ತೆರಳುವಾಗ ಅವರ ಮಾಂಗಲ್ಯದ ಸರ ಕಾಣೆಯಾಯಿತು. ದಾರಿಯಲ್ಲಿ ಬಿದ್ದಿದ್ದ ಮಾಂಗಲ್ಯ ಸರವನ್ನು ಅವರು ಸಾಕಷ್ಟು ಹುಡುಕಿದರು. ಆದರೆ, ಅದು ಪತ್ತೆ ಆಗಿರಲಿಲ್ಲ.
ಮಾಹಾಬಲೇಶ್ವರ ಮಂದಿರದ ಅಮೃತಾನ್ನ ಪ್ರಸಾದ ಭೋಜನದ ಬಳಿ ಬಿಜ್ಜೂರಿನ ಜಟ್ಟು ಗೌಡ ಅವರಿಗೆ ಈ ಸರ ಸಿಕ್ಕಿತು. ಅದನ್ನು ನೋಡಿದ ಅವರು ಪೊಲೀಸ್ ಹೊರಠಾಣೆಗೆ ಒಪ್ಪಿಸಿದರು. ಪೊಲೀಸರು ಸರ ಕಳೆದುಕೊಂಡವರ ಹುಡುಕಾಟ ನಡೆಸಿದಾಗ ಸ್ವರ ಶುಭಂ ಕಾಪಸೆ ಅವರು ಎದುರಾದರು. ಅವರದ್ದೇ ಸರ ಎಂದು ಖಚಿತಪಡಿಸಿಕೊಂಡು ಪೊಲೀಸರು ಅದನ್ನು ಹಸ್ತಾಂತರಿಸಿದರು.
`14 ಗ್ರಾಂ ಚಿನ್ನದ ಸರ ಕಾಣೆಯಾದಗ ಆತಂಕ ಎದುರಾಯಿತು. ಪ್ರಾಮಾಣಿಕ ಜನ ಹಾಗೂ ದಕ್ಷ ಪೊಲೀಸ್ ನೆರವಿನಿಂದ ಆ ಸರ ಮರಳಿ ಸಿಕ್ಕಿದೆ’ ಎಂದು ಸ್ವರ ಶುಭಂ ಕಾಪಸೆ ಅವರು ಹೇಳಿದರು. `ಪ್ರತಿಯೊಬ್ಬರು ಅವರ ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿರಿಸಿಕೊಳ್ಳಬೇಕು’ ಎಂದು ಪಿಎಸ್‌ಐ ಶಶಿಧರ ಹಾಗೂ ಪೊಲೀಸ್ ಸಿಬ್ಬಂದಿ ಜಟ್ಟಪ್ಪ ನಾಯ್ಕ, ರವಿ ಅವರು ಈ ವೇಳೆ ಅರಿವು ಮೂಡಿಸಿದರು.