ಸೊಸೈಟಿಯಲ್ಲಿ ನಡೆದ ಅಕ್ರಮಗಳನ್ನು ಪತ್ತೆ ಹಚ್ಚಲು ವಿಫಲರಾದ ಕಾರಣ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಕಾರವಾರದ ಚಿತ್ತಾಕುಲದಲ್ಲಿರುವ ಆಶ್ರಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಹಣಕಾಸು ಅವ್ಯವಹಾರ ವಿಷಯವಾಗಿ ಮುಂಬೈ ನಿವಾಸಿ ತನುಶ್ರೀ ಗಾಂವಕರ್ ಅವರು ಕಾರವಾರದ ಸಹಕಾರಿ ನಿಬಂಧಕರ ವಿರುದ್ಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Advertisement. Scroll to continue reading.
ತನುಶ್ರೀ ಗಾಂವಕರ್ ಅವರ ತಂದೆ ಪುರುಷೋತ್ತಮ ಗಾಂವಕಾರ್ ಹಾಗೂ ತಾಯಿ ಉಮಾ ಗಾಂವಕಾರ ಅವರು ಸದಾಶಿವಗಡದಲ್ಲಿರುವ ಆಶ್ರಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದರು. 2023ರ ಜನವರಿಯಲ್ಲಿ 1 ವರ್ಷದ ಠೇವಣಿಯನ್ನಿರಿಸಿದ್ದರು. 2024ರಲ್ಲಿ ಅವರ ಠೇವಣಿ ಹಣವನ್ನು ಸೊಸೈಟಿಯವರು ಮರಳಿಸಿರಲಿಲ್ಲ. ಒಟ್ಟು 1,20,71,987 ರೂ ಮರಳಿಸಲು ವಿಫಲರಾದ ಆಡಳಿತ ಮಂಡಳಿ ವಿರುದ್ಧ ಕುಟುಂಬದವರು ಕಿಡಿಕಾರಿದ್ದಾರೆ.
`ಆಶ್ರಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಮಾಜಿ ವ್ಯವಸ್ಥಾಪಕ ನೀಲೇಶ ನಾಯ್ಕ ಅವರು ಆಡಳಿತ ಮಂಡಳಿಯ ಅನುಮತಿಯಿಲ್ಲದೇ 30 ಕೋಟಿ ರೂ ಅಕ್ರಮ ಸಾಲ ನೀಡಿದ್ದಾರೆ. ಹೀಗಾಗಿಯೇ ಸೊಸೈಟಿ ನಷ್ಟ ಅನುಭವಿಸಿದೆ’ ಎಂದು ತನುಶ್ರೀ ಗಾಂವಕರ್ ಅವರು ದೂರಿದ್ದಾರೆ. `ಇಂಥ ಅಕ್ರಮ ಅವ್ಯವಹಾರ ನಡೆದರೂ ಅಧಿಕಾರಿಗಳು ಕಾಲಕ್ಕೆ ಸರಿಯಾಗಿ ಲೆಕ್ಕ ಪರಿಶೋಧನೆ ನಡೆಸದೇ ಕರ್ತವ್ಯ ಲೋಪ ಎಸಗಿದ್ದಾರೆ’ ಎಂದವರು ಅಸಮಧಾನವ್ಯಕ್ತಪಡಿಸಿದ್ದು, ಸಹಕಾರಿ ಸಂಘಗಳ ಉಪನಿಬಂಧಕರ ವಿರುದ್ಧವೂ ತನಿಖೆಗೆ ಆಗ್ರಹಿಸಿದ್ದಾರೆ.
`ತಮಗೆ ಆದ ಅನ್ಯಾಯಕ್ಕೆ ಆಶ್ರಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಬಾಬುರಾವ ರಾಣೆ, ಮಾಜಿ ವ್ಯವಸ್ಥಾಪಕ ನೀಲೇಶ ನಾಯ್ಕ, ಉಪಾಧ್ಯಕ್ಷ ಆನಂದು ಗಾಂವಕಾರ, ನಿರ್ದೇಶಕರಾದ ದೇವಿದಾಸ ದೇಸಾಯಿ, ಗೋಪಿನಾಥ ನಾಯ್ಕ, ಕೃಷ್ಣ ನಾಯ್ಕ, ಮಂಜುನಾಥ ನಾಯ್ಕ, ರಾಮಕೇಶ ಶೇಡಗುಲ್ಕರ್, ರತ್ನಾಕರ ನಾಯ್ಕ, ರೂಪಾಲಿ ದೇಸಾಯಿ, ರೇಷ್ಮಾ ನಾಯ್ಕ, ಹಾಗೂ ಸೊಸೈಟಿ ಪ್ರತಿನಿಧಿ ಸಂಧ್ಯಾ ಗಾಂವಕರ ಕಾರಣ’ ಎಂದು ಅವರು ದೂರಿದ್ದಾರೆ. ಎಲ್ಲಾ ಆರೋಪಿತರ ವಿರುದ್ಧ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.