ರಾಜಸ್ಥಾನದ ರತನ್ ಶರ್ಮಾ ಯಲ್ಲಾಪುರದ ಹಾಸಣಗಿಯಲ್ಲಿ ವಾಸವಾಗಿದ್ದು, ಗಾಂಜಾ ಸರಬರಾಜು ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಮಾದಕ ವ್ಯಸನ ಮಾರಾಟ ಮಾಡಿ ಈ ಹಿಂದೆ ಎರಡು ಬಾರಿ ಸಿಕ್ಕಿಬಿದ್ದಿದ್ದ ರತನ್ ಶರ್ಮಾ ಬುಧವಾರ ಮತ್ತೆ ಸಿಕ್ಕಿಬಿದ್ದಿದ್ದಾರೆ.
ಯಲ್ಲಾಪುರದ ಮಂಚಿಕೇರಿ-ಉಮ್ಮಚ್ಗಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ಆ ಕಳ್ಳರ ಪತ್ತೆಗಾಗಿ ಪೊಲೀಸರು ತಲೆಕೆಡಿಸಿಕೊಂಡಿದ್ದು,ಬುಧವಾರ ಯಲ್ಲಾಪುರ ಪಿಸೈ ರಾಜಶೇಖರ ವಂದಲಿ ಅವರು ವಿವಿಧ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಯಲ್ಲಾಪುರ ಎಪಿಎಂಸಿ ಬಳಿ ಅವರು ವಾಹನ ತಪಾಸಣೆ ನಡೆಸುತ್ತಿರುವಾಗ ರತನ್ ಶರ್ಮಾ ಬೈಕ್ ಮೇಲೆ ಅಲ್ಲಿಗೆ ಬಂದರು. ಪೊಲೀಸರನ್ನು ಕಂಡ ಕೂಡಲೇ ಬೈಕ್ ತಿರುಗಿಸಿ ಪರಾರಿಯಾಗುವ ಪ್ರಯತ್ನ ಮಾಡಿದರು.
ಪಿಸೈ ರಾಜಶೇಖರ ವಂದಲಿ ಅವರ ಜೊತೆಗಿದ್ದ ಮಂಚಿಕೇರಿ ಹೊರಠಾಣೆ ಹವಲ್ದಾರ್ ದೀಪಕ ನಾಯ್ಕ ಸಾಹಸದಿಂದ ರತನ್ ಶರ್ಮಾ ಅವರನ್ನು ಅಡ್ಡಗಟ್ಟಿದರು. ಅವರನ್ನು ತಪಾಸಣೆಗೆ ಒಳಪಡಿಸಿದಾಗ ಏನೂ ಸಿಗಲಿಲ್ಲ. ಆದರೆ, ಬೈಕಿನ ಟ್ಯಾಂಕರ್ ಬಳಿ ಗಮನಿಸಿದಾಗ ಅಲ್ಲಿದ್ದ ಚೀಲದಲ್ಲಿ ಗಾಂಜಾ ತುಂಬಿದ ಚೀಟಿಗಳು ಕಾಣಿಸಿದವು. ಪೊಲೀಸ್ ಸಿಬ್ಬಂದಿ ಪರಶುರಾಮ ದೊಡ್ಮನಿ, ಮಂಜಪ್ಪ ಪೂಜಾರ್ ಅವರು ಕೂಡಲೇ ರತನ್ ಶರ್ಮ ಅವರನ್ನು ಬಂಧಿಸಿದರು. ಆ ಬೈಕಿನಲ್ಲಿ 5 ಸಾವಿರ ರೂ ಮೌಲ್ಯದ 187 ಗ್ರಾಂ ಗಾಂಜಾ ಸಿಕ್ಕಿದ್ದು, ಅದನ್ನು ವಶಕ್ಕೆಪಡೆದ ಪೊಲೀಸರು ನ್ಯಾಯಾಲಯಕ್ಕೆ ವರದಿ ಒಪ್ಪಿಸಿದರು.
`ಮಾದಕ ವ್ಯಸನ ಜೀವನಕ್ಕೆ ಮಾರಕ’