ಕೊಂಕಣ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಮಯ ಆಮ್ರೇ ಅವರು ಸಂತೋಷ ಶೇಟ್ ಅವರಿಂದ ಆರುವರೆ ಲಕ್ಷ ರೂ ಹಣಪಡೆದಿದ್ದಾರೆ. ಆದರೆ, ಉದ್ಯೋಗವನ್ನು ಮಾತ್ರ ಕೊಡಿಸಿಲ್ಲ.
ಕುಮಟಾದ ಬಗ್ಗೋಣದಲ್ಲಿ ಸಂತೋಷ ಪ್ರಭಾಕರ ಶೇಟ್ ಅವರು ವಾಸವಾಗಿದ್ದಾರೆ. 32 ವರ್ಷದ ಅವರು ಇಂಜಿನಿಯರ್ ಆಗಿದ್ದು, ಇನ್ನಷ್ಟು ಒಳ್ಳೆಯ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದಾರೆ. ಹೀಗಿರುವಾಗ ಮುಂಬೈಯ ಅಮಯ ಆಮ್ರೇ ಅವರು ಸಂತೋಷ ಶೇಟ್ ಅವರಿಗೆ ಪರಿಚಯವಾದರು. ತಮ್ಮನ್ನು ಅವರು `ಕೊಂಕಣ ರೈಲ್ವೆಯ ಟ್ರಾಕ್ ಇನ್ಸಪೆಕ್ಟರ್’ ಎಂದು ಹೇಳಿಕೊಂಡರು. `ತಾನು ಕೊಂಕಣ ರೈಲ್ವೆ ಯುನಿಯನ್ ಸದಸ್ಯನಾಗಿದ್ದು, ಯಾರಿಗೆ ಬೇಕಾದರೂ ಉದ್ಯೋಗ ಕೊಡಿಸಬಲ್ಲೆ’ ಎಂದು ನಂಬಿಸಿದರು.
ಇದನ್ನು ನಂಬಿದ ಸಂತೋಷ ಶೇಟ್ ಅವರು ಅಮಯ ಆಮ್ರೇ ಅವರ ಕೈಗೆ 6.5 ಲಕ್ಷ ರೂ ಕೊಟ್ಟರು. ಜ್ಯೂನಿಯರ್ ಮೆಕಾನಿನಕಲ್ ಇಂಜಿನಿಯರ್ ಜಾಬ್ ಕೊಡಿಸುವುದಾಗಿ ಹೇಳಿದ್ದ ಅಮಯ ಆಮ್ರೇ ಕಾಸುಪಡೆದ ನಂತರ ಕೊಂಕಣ ರೈಲ್ವೆಯ ನೇಮಕಾತಿ ಪ್ರಕಟಣೆ ಪತ್ರ ರವಾನಿಸಿದರು. ಪರೀಕ್ಷಾ ಪತ್ರವನ್ನು ಕಳುಹಿಸಿದರು. ನೇಮಕಾತಿ ಆದೇಶ ಮಾದರಿಯ ಪತ್ರವನ್ನು ನೀಡಿದರು.
ಆದರೆ, ಅದೆಲ್ಲವೂ ನಕಲಿ ಎಂದು ಸಂತೋಷ ಶೇಟ್ ಅವರಿಗೆ ನಂತರ ಗೊತ್ತಾಯಿತು. ಹೀಗಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ವಂಚಕ ಅಮಯ ಆಮ್ರೇ ವಿರುದ್ಧ ಅವರು ದೂರು ನೀಡಿದರು.