ದಾಂಡೇಲಿಯ ಸಮಾಜ ಸೇವಕರು, ಉದ್ಯಮಿಗಳು, ಪ್ರೇಮ್ ವುಡ್ ಡೆಕೋರ್ಸ್ ಮಾಲಕರು ಹಾಗೂ ಪ್ರೇಮ್ ಜಿ ಪ್ರೊಡಕ್ಷನ್ ಮುಖ್ಯಸ್ಥರು ಆಗಿರುವ ಪ್ರೇಮಾನಂದ ಗವಸ ಅವರ ನಿರ್ಮಾಣದ ‘ರುದ್ರ ಅವತಾರ’ ಚಲನಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭವು ಬೆಂಗಳೂರಿನ ಜಿಟಿ ಮಾಲ್ ಇಲ್ಲಿಯ ಉತ್ಸವ್ ಲೆಗಸಿ ಸಭಾ ಭವನದಲ್ಲಿ ವರ್ಣರಂಜಿತವಾಗಿ ಜರುಗಿತು.
ಮೋಷನ್ ಪೋಸ್ಟರನ್ನು ಕನ್ನಡ ಚಿತ್ರರಂಗದ ಸುಪ್ರೀಂ ಹೀರೋ ಹಾಗೂ ‘ರುದ್ರ ಅವತಾರ’ ಚಲನಚಿತ್ರದ ಮುಖ್ಯ ಪಾತ್ರದಲ್ಲಿರುವ ಶಶಿಕುಮಾರ್ ಅವರು ಬಿಡುಗಡೆಗೊಳಿಸಿದರು.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಪ್ರೇಮಾನಂದ ಗವಸ ಅವರು ನಾನೊಬ್ಬ ಬ್ಯುಸಿನೆಸ್ ಮ್ಯಾನ್. ಸಮಾಜ ಸೇವೆ ನನ್ನ ಆಸಕ್ತಿ. ಸೇವೆಯಲ್ಲಿ ಸಂತೃಪ್ತಿ ಇದೆ. ಆದರೆ ಚಲನಚಿತ್ರದಲ್ಲಿ ನಟನೆ ಮಾಡಬೇಕೆಂದು ಕನಸು ಕಂಡಿದ್ದೆ. ಆದರೆ ಭಗವಂತ ನನ್ನಿಂದಲೆ ಚಲನಚಿತ್ರ ನಿರ್ಮಾಣ ಮಾಡುವುದರ ಜೊತೆಗೆ ನಟನೆ ಮಾಡಲು ಸಹ ಅನುಗ್ರಹಿಸಿದ್ದಾನೆ. ಇದರಿಂದ ಅಪಾರವಾದ ಸಂತಸವಾಗಿದೆ. ಕೋಟ್ಯಂತರ ಜನರ ಮನಸ್ಸು ಗೆದ್ದ ನಟರಾದ ಶಶಿಕುಮಾರ್ ಮತ್ತು ತಾರಾ ಅವರ ಜೊತೆ ವೇದಿಕೆ ಹಂಚಿಕೊಳ್ಳುವಂತಹ ಅಪರೂಪದ ಅಪೂರ್ವ ಅವಕಾಶ ನನಗೆ ಒದಗಿ ಬಂದಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ ಎಂದರು. ನಾನು ಹಣ ಮಾಡುವ ಉದ್ದೇಶದಿಂದ ಈ ಚಲನಚಿತ್ರ ನಿರ್ಮಾಣಕ್ಕೆ ಇಳಿದಿಲ್ಲ. ಸಮಾಜಕ್ಕೆ ಒಂದು ಉಪಯುಕ್ತ ಸಂದೇಶವನ್ನು ನೀಡಬೇಕು. ಆ ಮೂಲಕವಾಗಿ ಸಮಾಜ ನಿರ್ಮಾಣದ ಆಶಯವನ್ನು ಹೊಂದಿ ಚಲನಚಿತ್ರ ನಿರ್ಮಾಣಕ್ಕೆ ಮುಂದಡಿಯಿಟ್ಟಿದ್ದೇನೆ. ಇದು ಆರಂಭ ಮಾತ್ರ. ಕರುನಾಡಿನ ಜನತೆ ಪ್ರೀತಿಸಿ ಬೆಳೆಸಿ ಪ್ರೋತ್ಸಾಹಿಸಿ, ಆಶೀರ್ವದಿಸಿದ್ದಲ್ಲಿ ಮತ್ತಷ್ಟು ಚಲನಚಿತ್ರ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದೇನೆ ಎಂದ ಅವರು ನಿರ್ದೇಶಕ ಸವಾದ್ ಮಂಗಳೂರು ಅವರು ನನ್ನನ್ನು ಭೇಟಿಯಾಗಿ ಕಥೆಯನ್ನು ವಿವರಿಸುತ್ತಾ ಹೋದಾಗ, ಇದೊಂದು ಸಮಾಜಕ್ಕೆ ಉಪಯುಕ್ತವಾದ ಸಂದೇಶವನ್ನು ಸಾರುವ ಕಥೆಯ ಹಂದರವನ್ನು ಹೊಂದಿದೆ ಎನ್ನುವುದನ್ನು ಅರಿತು, ‘ರುದ್ರ ಅವತಾರ’ ಚಲನಚಿತ್ರ ನಿರ್ಮಾಣಕ್ಕೆ ಇಳಿದಿದ್ದೇನೆ. ಈ ಚಲನಚಿತ್ರದಲ್ಲಿ ನನಗೂ ನನ್ನ ಇಷ್ಟದಂತೆ ಹಾಗೂ ಆಸಕ್ತಿಯಂತೆ ಅತ್ಯುತ್ತಮವಾದ ಪಾತ್ರವನ್ನು ನೀಡಲಾಗಿದ್ದು, ಆ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸುವ ವಿಶ್ವಾಸ ನನಗಿದೆ ಎಂದರು. ದೂರದ ದಾಂಡೇಲಿಯವನಾದ ನನ್ನ ನಿರ್ಮಾಣದ ಈ ಚಲನಚಿತ್ರವನ್ನು ಈ ನಾಡಿನ ಜನ ಮೆಚ್ಚಿ ಆಶೀರ್ವದಿಸಬೇಕೆಂದು ವಿನಂತಿಸಿದರು.
ನಿರ್ದೇಶಕ ಸವಾದ್ ಮಂಗಳೂರು ಮಾತನಾಡುತ್ತ, ‘ರುದ್ರ ಅವತಾರ ಶಿವನ ಮತ್ತೊಂದು ರೂಪ. ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳ ರಕ್ಷಣೆಗೋಸ್ಕರ ಯಾವ ರೀತಿ ಹೋರಾಡುತ್ತಾರೆ, ಹೇಗೆ ರುದ್ರ ಅವತಾರ ತಾಳುತ್ತಾರೆ ಎಂಬುದನ್ನು ಈ ಚಿತ್ರ ಸಾದರಪಡಿಸುತ್ತದೆ. ಮಕ್ಕಳ ಕನಸುಗಳನ್ನು ಈಡೇರಿಸುವ ಸಲುವಾಗಿ, ಪೋಷಕರು ತಮ್ಮ ಕನಸು, ಆಸೆಗಳನ್ನು ಕಟ್ಟಿಟ್ಟು ಜೀವನ ನಡೆಸುತ್ತಾರೆ, ಅದೇ ತಮ್ಮ ಮಕ್ಕಳಿಗೆ ತೊಂದರೆ ಎದುರಾದಾಗ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಯಾವ ರೀತಿ ಹೋರಾಡುತ್ತಾರೆ. ಹೇಗೆ ರುದ್ರ ಅವತಾರ ತಾಳುತ್ತಾರೆ ಎನ್ನುವುದೇ ಈ ಚಿತ್ರದ ಕಥಾಹಂದರ. ಈ ಕಥೆಗೆ ಮೂಲ ಪ್ರೇರಣೆಯೇ ದಾಂಡೇಲಿಯ ಡ್ಯಾನ್ಸ್ ಮಾಸ್ಟರ್ ಅಭಿಷೇಕ್ ಪಾಟೀಲ್.10,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿಯನ್ನು ನೀಡುವ ಮೂಲಕ ಗಮನ ಸೆಳೆದಿರುವ ಅಭಿಷೇಕ್ ಪಾಟೀಲ್ ಅವರಿಂದಲೇ ನಿರ್ಮಾಪಕರ ಪರಿಚಯವಾಗಿ ನನ್ನ ಕನಸು ನನಸಾಗುವ ರೀತಿಯಲ್ಲಿ ಸಾಗುತ್ತಿದೆ ಎಂದರು. ಪ್ರಮುಖವಾಗಿ ಈ ಕಥೆಯಲ್ಲಿ ಮೂರು ಪಾತ್ರಗಳನ್ನು ಶಿವನ ರುದ್ರ ಅವತಾರದಲ್ಲಿ ನೋಡಬಹುದು, ಅವರಲ್ಲಿ ಮುಖ್ಯವಾಗಿ ಬರುವವರೇ ಶಶಿಕುಮಾರ್. ನವೆಂಬರ್ 24ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದರು.
ಸವಾದ್ ಮಂಗಳೂರು ಅವರು ಅಭಿಷೇಕ್ ಪಾಟೀಲ್ ಅವರ ಹೆಸರನ್ನು ಹೇಳುತ್ತಿದ್ದಂತೆಯೇ ನಟ ಶಶಿಕುಮಾರ್ ಅವರು ಅಭಿಷೇಕ್ ಪಾಟೀಲ್ ಅವರನ್ನು ವೇದಿಕೆಗೆ ಕರೆಯುವಂತೆ ಸೂಚಿಸಿದರು. ಆನಂತರ ಅಭಿಷೇಕ್ ಪಾಟೀಲ್ ಅವರನ್ನು ವೇದಿಕೆಗೆ ಗೌರವದಿಂದ ಬರಮಾಡಿಕೊಳ್ಳಲಾಯಿತು.
ಸುಪ್ರೀಂ ಹಿರೋ ಶಶಿಕುಮಾರ್ ಮಾತನಾಡುತ್ತ, ‘ಇದೊಂದು ಅತ್ಯುತ್ತಮವಾದ ಚಿತ್ರವಾಗಿದೆ. ಹೀರೋ, ಹೀರೋಯಿನ್ ಕಥೆಯಲ್ಲ, ಇಲ್ಲಿ ಕಂಟೆಂಟೇ ಹೀರೋ. ಈ ಚಿತ್ರದಲ್ಲಿ ನಾನೊಬ್ಬ ಆಟೋ ಡ್ರೈವರ್, ಹೆಣ್ಣುಮಗಳ ತಂದೆಯಾಗಿ ನಟಿಸುತ್ತಿದ್ದೇನೆ, ಸಂಗೀತಾ ನನ್ನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಮಗಳಿಗಾಗಿ ಹೋರಾಡೋ ತಂದೆಯ ಪಾತ್ರ ನನ್ನದು. ಚಿತ್ರದಲ್ಲಿ ಹಾರ್ಟ್ ಟಚಿಂಗ್ ಸೀಕ್ವೆನ್ಸ್ ತುಂಬಾನೇ ಇದೆ, ಈ ಚಿತ್ರದ ಪ್ರಥಮಾರ್ಧ ಕಥೆ ಕೇಳಿದಾಗಲೇ ನನಗೆ ರೋಮಾಂಚನವಾಯಿತು’ ಎಂದು ಹೇಳಿದರು.
ಹಿರಿಯನಟಿ ತಾರಾ ಅನುರಾಧ ಅವರು ಮಾತನಾಡುತ್ತ, ‘ಈ ಚಿತ್ರದ ಯಾವುದೇ ಪಾತ್ರವಾಗಲೀ ಸುಮ್ಮನೆ ಬಂದು ಹೋಗುವುದಲ್ಲ. ಎಲ್ಲ ಕ್ಯಾರೆಕ್ಟರ್ ಕಥೆಯ ಭಾಗವಾಗಿವೆ. ತುಂಬಾ ವರ್ಷಗಳ ನಂತರ ಶಶಿಕುಮಾರ್, ಸಂಗೀತಾ ಜತೆ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಗೀತಾ, ಯಶ್ ಶೆಟ್ಟಿ, ವರ್ಧನ್ ತೀರ್ಥಳ್ಳಿ, ಅಂಕಿತಾ ಜಯರಾಮ್, ಸಾಧನಾ ಇವರೆಲ್ಲಾ ಈ ಚಿತ್ರದ ಕಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶಶಿಕುಮಾರ್ ಪುತ್ರ ಆದಿತ್ಯ ಕೂಡ ಹಾಜರಿದ್ದು ಶುಭ ಹಾರೈಸಿದರು.
ಅಲನ್ ಭರತ್ ಅವರ ಛಾಯಾಗ್ರಹಣ, ಪಾಲ್ ಅಲೆಕ್ಸ್ ಅವರ ಸಂಗೀತ ಸಂಯೋಜನೆ, ಶ್ರೀಕಾಂತ್ ಅವರ ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ, ಸಂಕಲನಕಾರರಾಗಿ ಶ್ರೀಕಾಂತ್, ನೃತ್ಯ ನಿರ್ದೇಶಕರಾಗಿ ಬಾಲು ಮಾಸ್ಟರ್, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ, ಬಿ.ಆರ್.ನವೀನ್ ಕುಮಾರ್ ಅವರಿಂದ ಶಬ್ದ ವಿನ್ಯಾಸ, ಗುರುಪ್ರಸಾದ್ ಬೆಳ್ತಂಗಡಿ ಈ ಎಫ್ ಎಕ್ಷ್, ಕಲಾ ನಿರ್ದೇಶಕರಾಗಿ ಗಣೇಶ್ ಎಸ್, ವಸ್ತ್ರ ವಿನ್ಯಾಸ ವಿನೋದ್, ಮೇಕಪ್ ಪಸಪುಲೆಟಿ ನಾಗರಾಜ್, ಮಾರ್ಕೆಟಿಂಗ್ ಲಿಖಿತ್ ರೈ, ರೋಡ್ ಸೈಡ್ ವಿಲೇಜ್ ಪ್ರವೀಣ್, ವಿವಾನ್ ವಶಿಷ್ಠ ಇನ್ಫೀಗೋ ಪ್ರೊಡಕ್ಷನ್ ಮತ್ತು ಪಿ ಆರ್ ಓ ಆಗಿ ನಾಗೇಂದ್ರ ಅವರು ಕಾರ್ಯನಿರ್ವಹಿಸಲಿದ್ದಾರೆ.
ಈ ಚಲನಚಿತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್, ಡಾ. ತಾರಾ ಅನುರಾಧ, ಶೋಭಾರಾಜ್, ಪ್ರೇಮಾನಂದ ಗವಸ ಅಭಿ ದಾಸ್, ಸಂಗೀತ ಅನಿಲ್, ಯಸ್ ಶೆಟ್ಟಿ, ರಘು ಪಾಂಡೇಶ್ವರ್, ವರ್ಧನ್, ಬಾಲ ರಾಜವಾಡಿ, ರೇಣು ಶಿಕಾರಿ, ಕುಮಾರಿ ಸಾಧನ, ಕುಮಾರಿ ಪ್ರಜ್ಞಾ ಅವರು ನಟಿಸಲಿದ್ದಾರೆ. ದಾಂಡೇಲಿಯ ಸಂದೇಶ್ ಎಸ್.ಜೈನ್, ಅಭಿಷೇಕ ಪಾಟೀಲ್, ಜಾನ್ಸನ್ ರೋಡ್ರಿಗಸ್, ರೇಷ್ಮಾ ಪ್ರದೀಪ ಶೆಟ್ಟಿ, ರುಕ್ಸನಾ ಕಲೇಗಾರ, ಪ್ರಗತಿ ಗವಸ, ದಾತ್ರಿ ಮೊದಲಾದವರು ಮೊಟ್ಟ ಮೊದಲ ಬಾರಿಗೆ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಒಟ್ಟಿನಲ್ಲಿ ಬಹುನಿರೀಕ್ಷಿತ ಈ ಚಲನಚಿತ್ರದ ಶೂಟಿಂಗ್ ಇದೇ ನವಂಬರ್ 24ರಂದು ಆರಂಭವಾಗಲಿದೆ. ಬಹುತೇಕ ಮೇ ಅಂತ್ಯದೊಳಗೆ ಇಲ್ಲವೇ ಜೂನ್ ಮೊದಲ ವಾರದಲ್ಲಿ ಈ ಚಲನಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.