ಗುಡ್ಡಗಾಡು ಜನರಿಗೆ ಆರೋಗ್ಯ ಸೇವೆ ನೀಡಿ ಅನುಭವವಿರುವ ಸ್ಕೋಡ್‌ವೆಸ್ ಸಂಸ್ಥೆ ಸದ್ಯ ಗ್ರಾಮೀಣ ಭಾಗದ ಜನ ಅನುಭವಿಸುವ ಕಣ್ಣಿನ ಸಮಸ್ಯೆ ಬಗೆಹರಿಸುವುದಕ್ಕಾಗಿ `ನೇತ್ರರಥ’ ಎಂಬ ಸಂಚಾರಿ ಕಣ್ಣಿನ ಆಸ್ಪತ್ರೆಯನ್ನು ರೂಪಿಸಿದೆ. ಆ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗೂ ಈ ವಾಹನದ ಮೂಲಕ ನುರಿತ ವೈದ್ಯರನ್ನು ಕಳುಹಿಸಿ ಜನರ ದೃಷ್ಠಿದೋಷ ದೂರ ಮಾಡುವ ಪ್ರಯತ್ನಕ್ಕೆ ಸ್ಕೋಡ್‌ವೆಸ್ ಮುಂದಾಗಿದೆ.
ಗುಜರಾತ್‌ನ ದೇಸಾಯಿ ಫೌಂಡೇಶನ್, ಕೇರಳದ ಆಧ್ಯನ್ ಫೌಂಡೇಶನ್ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ಈ ರಥ ಸಂಚರಿಸಲಿದ್ದು, ನವೆಂಬರ್ 24ರ ಬೆಳಗ್ಗೆ 11.30ಕ್ಕೆ ಶಿರಸಿಯ ಹುಲೇಕಲ್ ಪಂಚಾಯಿತಿಯ ಆವಾರದಲ್ಲಿ ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಇದನ್ನು ಉದ್ಘಾಟನೆ ಮಾಡಲಿದ್ದಾರೆ. ಅದಾದ ನಂತರ ಕಣ್ಣಿನ ಆರೋಗ್ಯ ರಕ್ಷಣೆಗಾಗಿ ಸಿದ್ಧವಾದ ಸ್ಕೊಡ್‌ವೆಸ್ ಸಂಸ್ಥೆಯ ನೇತ್ರರಥ ವಾಹನ ಎಲ್ಲಡೆ ಸಂಚರಿಸಿ ದೃಷ್ಠಿದೋಷ ನಿವಾರಣೆಗೆ ಶ್ರಮಿಸಲಿದೆ. ಸದ್ಯದ ವೇಳಾಪಟ್ಟಿಯಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ ಮಟ್ಟದಲ್ಲಿ ನೇತ್ರರಥದ ಸಂಚಾರ ನಡೆಯಲಿದೆ. ಈ ರಥದಲ್ಲಿ ವಿನೂತನ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಲಾಗಿದೆ.
ನವೆಂಬರ್ 24ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಶಿರಸಿ ನಗರದ ಸಹಾಯಕ ಆಯುಕ್ತೆ ಕಾವ್ಯಾರಾಣಿ, ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಜಗದೀಶ ಗೌಡ ಭಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಗಾಗಿ ಗುಜರಾತ್‌ನ ದೇಸಾಯಿ ಫೌಂಡೇಶನ್‌ನ ಅಭಿವೃದ್ಧಿ ವಿಭಾಗದ ನಿರ್ದೇಶಕ ಮನೋಜ ಪಾಂಡಾ, ಕೇರಳದ ಆಧ್ಯನ್ ಫೌಂಡೇಶನ್‌ನ ಮುಖ್ಯಸ್ಥರಾದ ಅಂಜನಾ ಕಾವೂರು, ಬೆಂಗಳೂರಿನ ನಯನ ಜ್ಯೋತಿ ಟ್ರಸ್ಟ್ನ ಸಂಸ್ಥಾಪಕ ಟ್ರಸ್ಟಿ ಜಯರಾಮನ್, ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕುಮಾರ ವಿ ಕೂರ್ಸೆ, ಕಾರ್ಯದರ್ಶಿ ಮತ್ತು ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ಸಹ-ಕಾರ್ಯದರ್ಶಿ ಕೆ ಎನ್ ಹೊಸಮನಿ, ಕಾರ್ಯಕಾರಿ ಸದಸ್ಯರಾದ ದಯಾನಂದ ಅಗಾಸೆ, ಪ್ರತಿಭಾ ಭಟ್ ಹಾಗೂ ಹುಲೇಕಲ್ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಜೊತೆಗಿರಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಲೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಸೀಂ ಸಾಬ್‌ವಹಿಸಲಿದ್ದು, ಆ ದಿನ ಯೋಜನೆಯ ಉಪಯೋಗವನ್ನು ಹುಲೇಕಲ್ ಗ್ರಾಮ ಪಂಚಾಯತ್‌ನ ವ್ಯಾಪ್ತಿಯ ಸಾರ್ವಜನಿಕರು ಬಳಸಿಕೊಳ್ಳುವಂತೆ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮನವಿ ಮಾಡಿದ್ದಾರೆ.