ಸಿದ್ದಾಪುರ-ಕುಮಟಾ ಮಾರ್ಗವಾಗಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಶುಕ್ರವಾರ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಆತಂಕದಿoದ ಹೌಹಾರಿದ್ದಾರೆ. ಈ ವೇಳೆ ಬಸ್ಸಿನಲ್ಲಿದ್ದ ಅಗ್ನಿಶಮನ ಸಾಮಗ್ರಿಯೂ ಹಾಳಾಗಿದ್ದು, ಜನರ ಅರಿವಿಗೆ ಬಂದಿದೆ.
ಕುಮಟಾ ಡಿಪೋದ ಬಸ್ಸು ಸಿದ್ದಾಪುರ – ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ಆ ಬಸ್ಸು ಕಾರವಾರಕ್ಕೆ ಹೊರಟಿದ್ದು, ಬಡಾಳ ಘಟ್ಟದಲ್ಲಿ ಬಸ್ಸಿನಿಂದ ದೊಡ್ಡ ಪ್ರಮಾಣದಲ್ಲಿ ಹೊಗೆ ಹೊರಬಂದಿತು. ಸಣ್ಣ ಹೊಗೆ ಬಂದಾಗ ಜನ ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಹೊಗೆ ದೊಡ್ಡದಾದಾಗ ಬೊಬ್ಬೆ ಹೊಡೆದು ಬಸ್ಸಿನಿಂದ ಹಾರಲು ಶುರು ಮಾಡಿದರು.
ಪ್ರಯಾಣಿಕರು ಗಾಬರಿಗೊಂಡಿದ್ದರಿoದ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ತಕ್ಷಣವೇ ಬಸ್ಸು ನಿಲ್ಲಿಸಿದರು. ಎಲ್ಲಾ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿದರು. ಅರ್ಧ ಗಂಟೆ ಕಾಲ ಪ್ರಯಾಣಿಕರು ರಸ್ತೆಯ ಪಕ್ಕದಲ್ಲಿ ಕಾದಿದ್ದು, ಆ ಮಾರ್ಗವಾಗಿ ಬಂದ ಇನ್ನೊಂದು ಬಸ್ಸಿನ ಮೂಲಕ ಪ್ರಯಾಣಿಕರನ್ನು ತಲುಪಬೇಕಾದ ಸ್ಥಳಕ್ಕೆ ಕಳುಹಿಸಲಾಯಿತು.
ಅಗ್ನಿಶಮನ ಸಲಕರಣೆಯೇ ಇಲ್ಲ!
ಸಿದ್ದಾಪುರ-ಕಾರವಾರ ಬಸ್ ನಲ್ಲಿ ಬಸ್ಸಿನ ಟೈರ್ ಜ್ಯಾಮ್ ಆಗಿ ಹೊಗೆ ಬರುತ್ತಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದರು. ಬಸ್ಸಿನಲ್ಲಿ ಅಗ್ನಿಶಾಮನ ಸಾಧನ ಇಲ್ಲದ ಕಾರಣ ಕುಡಿಯಲು ತಂದಿದ್ದ ಬಾಟಲಿ ನೀರನ್ನು ಪ್ರಯಾಣಿಕರು ಹೊಗೆ ಬಂದ ಕಡೆ ಚೆಲ್ಲಿದರು. ಎಲ್ಲಾ ಸಾರಿಗೆ ಬಸ್ಗಳಲ್ಲಿ ಬೆಂಕಿ ಅವಘಡ ತಡೆಯಲು ಅಗ್ನಿಶಮನ ಸಾಧನ ಅಳವಡಿಸುವುದು ಅಗತ್ಯ ಎಂದು ಪ್ರಯಾಣಿಕರು ಹೇಳಿದರು.