ಮನೆಗೆ ಅಳವಡಿಸಿದ್ದ ಕಪ್ಪು ಕಲ್ಲಿನ ಮೇಲೆ ನಡೆಯುತ್ತಿದ್ದ ವೃದ್ಧರೊಬ್ಬರು ಕಾಲು ಜಾರಿ ಬಿದ್ದು ಕೊನೆಯುಸಿರೆಳೆದಿದ್ದಾರೆ.
Advertisement. Scroll to continue reading.
ಮುಂಡಗೋಡಿನ ಮಳಗಿಯ ಧರ್ಮಾ ಕಾಲೋನಿಯ ವೀರಾಪುರದಲ್ಲಿ ರಾಮರಾಯ ಗಣಪತಿ ದೈವಜ್ಞ (78) ಅವರು ವಾಸವಾಗಿದ್ದರು. ಅವರ ಮನೆಯ ವರಂಡಾಗೆ ಕಪ್ಪು ಕಲ್ಲು ಅಳವಡಿಸಿದ್ದು, ಅಲ್ಲಿ ನಡೆದಾಡುವವರು ಕಾಲು ಜಾರಿ ಬೀಳುತ್ತಿದ್ದರು. ಆದರೆ, ಬಿದ್ದವರಿಗೆ ದೊಡ್ಡ ಪ್ರಮಾಣದಲ್ಲಿ ಪೆಟ್ಟಾಗದ ಕಾರಣ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ರಾಮರಾಯ ದೈವಜ್ಞ ಅವರು ಆಗಾಗ ಅಲ್ಲಿ ಬಿದ್ದಿದ್ದರು. ಅದಾಗಿಯೂ, ಸುಧಾರಿಸಿಕೊಳ್ಳುತ್ತಿದ್ದ ಅವರು ಮೊನ್ನೆ ಕೊನೆಯದಾಗಿ ಅಲ್ಲಿ ಜಾರಿ ಬಿದ್ದರು.
ನವೆಂಬರ್ 27ರಂದು ಬೆಳಗ್ಗೆ ರಾಮರಾಯ ದೈವಜ್ಞ ಅವರು ಮನೆ ಹೊರಗೆ ಚಹಾ ತಿಂಡಿ ಸೇವಿಸಿ ಅಲ್ಲಿಯೇ ಕುಳಿತಿದ್ದರು. ಅಲ್ಲಿಂದ ಎದ್ದು ಮನೆಯೊಳಗೆ ಬರುವಾಗ ಕಲ್ಲಿನ ಮೇಲೆ ಕಾಲು ಜಾರಿ ಬಿದ್ದರು. ಈ ವೇಳೆ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ರಾಮರಾಯ ದೈವಜ್ಞ ಅವರನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಸೇರಿಸಲಾಯಿತು. ಎರಡು ದಿನದ ಚಿಕಿತ್ಸೆ ನೀಡಿದರೂ ಅವರು ಬದುಕಲಿಲ್ಲ. ತಂದೆಯ ಸಾವಿನ ಬಗ್ಗೆ ಕುರ್ಲಿ ಬಳಿಯ ಹೊಸಕೊಪ್ಪದ ಭಾರತಿ ನಾಗರಾಜ ಪೈ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.