ಶಿರಸಿ ಕೆರೆಶಿಂಗನಳ್ಳಿಯಲ್ಲಿಯ ಕೇಶವ ಹೆಗಡೆ ಅವರ ಮನೆ ಮುಂದಿನ ಅಟ್ಟದಿಂದ ನೆಲಕ್ಕೆ ಬಿದ್ದ ಗದ್ದೆಶಿಂಗನಳ್ಳಿಯ ರಾಮಾ ನಾಯ್ಕ ಅವರು ಅಲ್ಲಿದ್ದ ತುಳಸಿ ಪೀಠಕ್ಕೆ ತಲೆ ಬಡಿದು ಸಾವನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ.
ಶಿರಸಿಯ ಕೋಳಿಗಾರ ಬಳಿಯ ಗದ್ದೆಶಿಂಗನಳ್ಳಿಯಲ್ಲಿ ರಾಮಾ ಅಣ್ಣಪ್ಪ ನಾಯ್ಕ (63) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಊರಿನ ವಿವಿಧ ಕಡೆ ಕೆಲಸಕ್ಕೆ ಹೋಗುತ್ತಿದ್ದರು. ನವೆಂಬರ್ 16ರಂದು ಅವರು ಕೆರೆಶಿಂಗನಳ್ಳಿಯಲ್ಲಿರುವ ಕೇಶವ ವೆಂಕಟ್ರಮಣ ಹೆಗಡೆ ಅವರ ಮನೆ ಕೆಲಸಕ್ಕೆ ಹೋಗಿದ್ದರು. ಕೇಶವ ಹೆಗಡೆ ಅವರು ರಾಮಾ ನಾಯ್ಕ ಅವರನ್ನು ಅಟ್ಟದ ಕೆಲಸಕ್ಕಾಗಿ ನೇಮಿಸಿದ್ದರು.
ಕೇಶವ ಹೆಗಡೆ ಅವರ ಮನೆ ಮುಂದಿನ ಅಟ್ಟಕ್ಕೆ ಅಡಿಕೆ ದಬ್ಬೆಗಳನ್ನು ಹಾಕಲಾಗಿತ್ತು. ಅದರ ಮೇಲೆ ತಗಡಿನ ಶೀಟುಗಳನ್ನು ಅಳವಡಿಸಲಾಗಿದ್ದು, ಆ ತಗಡುಗಳನ್ನು ರಾಮಾ ನಾಯ್ಕ ಅವರು ತೆಗೆಯುತ್ತಿದ್ದರು. ಹೀಗಿರುವಾಗ ಅಟ್ಟದ ಮೇಲೆ ಕಾಲು ಜಾರಿತು. ರಾಮಾ ನಾಯ್ಕ ಅವರು ಅಂಗಳಕ್ಕೆ ಬಿದ್ದರು. ಆ ವೇಳೆ ಅಂಗಳದಲ್ಲಿದ್ದ ತುಳಸಿ ಕಟ್ಟೆಗೆ ರಾಮಾ ನಾಯ್ಕ ಅವರ ತಲೆ ಬಡಿಯಿತು.
ಪರಿಣಾಮ ತಲೆ ಹಿಂದೆ ಭಾರೀ ಪ್ರಮಾಣದ ಗಾಯವಾಯಿತು. ತಲೆಯಿಂದ ರಕ್ತ ಸುರಿಯುತ್ತಿತ್ತು. ಇದನ್ನು ನೋಡಿದ ಅಲ್ಲಿದ್ದ ಇನ್ನಿತರರು ರಾಮಾ ನಾಯ್ಕ ಅವರನ್ನು ಶಿರಸಿಯ ಪಂಡಿತ್ ಆಸ್ಪತ್ರೆಗೆ ತರುವ ಪ್ರಯತ್ನ ಮಾಡಿದರು. ಆದರೆ, ಹುತ್ಗಾರ ಬಳಿ ಬರುವಾಗಲೇ ರಾಮಾ ನಾಯ್ಕ ಅವರು ಕೊನೆಯುಸಿರೆಳೆದರು. ಈ ಎಲ್ಲಾ ವಿಷಯದ ಬಗ್ಗೆ ರಾಮಾ ನಾಯ್ಕ ಅವರ ಪುತ್ರ ವಿನಾಯಕ ನಾಯ್ಕ ಅವರು ಶಿರಸಿ ಗ್ರಾಮೀಣ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
`ಕೃಷಿ ಕೆಲಸ ಮಾಡುವಾಗ ಜಾಗೃತರಾಗಿರಿ’