ರಸ್ತೆ ದುರಸ್ಥಿ ಮಾಡಿಕೊಡುವಂತೆ ಆ ಗ್ರಾಮದ ಜನ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಸರ್ಕಾರ ಗ್ರಾಮದ ಜನರ ಮನವಿ ಆಲಿಸದ ಕಾರಣ ಪರಸ್ಪರ ಸಹಕಾರದಿಂದ ಆ ಊರಿನವರೇ ರಸ್ತೆ ಮಾಡಿದರು!
ಸಿದ್ದಾಪುರ ತಾಲೂಕಿನ ಹಸರಗೋಡ ಪಂಚಾಯತಿ ವ್ಯಾಪ್ತಿಯ ದಂಟಕಲ್-ಹೊಸ್ಮನೆ ಗ್ರಾಮಕ್ಕೆ ಇದೀಗ ಹೊಸ ರಸ್ತೆ ನಿರ್ಮಾಣವಾಗಿದೆ. ಊರಿನ ಜನರೆಲ್ಲ ಸೇರಿ ತಮ್ಮದೇ ಖರ್ಚಿನಲ್ಲಿ ರಸ್ತೆ ನಿರ್ಮಿಸಿದ್ದಾರೆ.
ಕಾನೂಸೂರು ಗ್ರಾಮ ಪಂಚಾಯತಿಯ ಅಡ್ಕಳ್ಳಿ-ದಂಟಕಲ್-ಹೊಸ್ಮನೆ-ಕುಚಗುAಡಿ-ಕೋಡ್ಸರ ಕೂಡು ರಸ್ತೆ ಅನೇಕರ ಓಡಾಟಕ್ಕೆ ಅಗತ್ಯವಿದೆ. ಈ ರಸ್ತೆಯಲ್ಲಿ ಅಡ್ಕಳ್ಳಿಯಿಂದ ದಂಟಕಲ್ ತನಕ ಡಾಂಬರು ರಸ್ತೆಯಿದೆ. ಅದೇ ರೀತಿ ಕೋಡ್ಸರದಿಂದ ಕುಚಗುಂಡಿ ತನಕ ಡಾಂಬರ್ ಹಾಕಲಾಗಿದೆ. ಅದರ ನಡುವಿನ ರಸ್ತೆ ಕಚ್ಚಾ ರಸ್ತೆಯಾಗಿದ್ದು ತೀರಾ ಹಾಳಾಗಿದೆ. ಕಳೆದ ಮಳೆಗಾಲದ ಸಂದರ್ಭದಲ್ಲಿ ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ ಬಿದ್ದಿದ್ದರಿಂದ ಜನ ಸಮಸ್ಯೆ ಅನುಭವಿಸಿದ್ದರು.
ನಿತ್ಯ ನೂರಾರು ಜನ ಓಡಾಡುವ ಈ ರಸ್ತೆಯಲ್ಲಿ ಆಗಾಗ ಅಪಘಾತಗಳಾಗುತ್ತಿದ್ದವು. ಹೀಗಾಗಿ ರಸ್ತೆ ಸರಿಪಡಿಸಿ ಎಂದು ಜನ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅದರಿಂದ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ದಂಟಕಲ್-ಹೊಸ್ಮನೆ ಗ್ರಾಮದ 9 ಮನೆಯವರು ಸೇರಿ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದರು. ಈ ಎಲ್ಲರೂ ಸೇರಿ ಯಂತ್ರೋಪಕರಣ ತರಿಸಿದರು. ತಾವೇ ಮುಂದೆ ನಿಂತು ರಸ್ತೆ ಮಾಡಿಸಿದರು.