ಗರ್ಭಕೋಶದ ಒಳಗೆ ಬೆಳೆದಿದ್ದ ದೊಡ್ಡ ಗಾತ್ರದ ಗಡ್ಡೆಯನ್ನು ಶಿರಸಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ನೇತ್ರಾವತಿ ಶಿರಸಿಕರ್ ಅವರು ಹೊರತೆಗೆದಿದ್ದಾರೆ. ಡಾ ಮಹೇಶ ಹೆಗಡೆ, ಡಾ ಪದ್ಮಿನಿ ಪೈ, ಡಾ ವಿನಾಯಕ ತಂಬದಮನೆ ಸೇರಿ ಕೆಜಿ ಗಾತ್ರದ ಗಡ್ಡೆಯನ್ನು ಗರ್ಭದೊಳಗಿರಿಸಿಕೊಂಡು ನಿತ್ಯವೂ ನರಳುತ್ತಿದ್ದ ಬಡ ಮಹಿಳೆಯ ಪ್ರಾಣ ಕಾಪಾಡಿದ್ದಾರೆ.
ಶಿರಸಿಯ ಗ್ರಾಮೀಣ ಭಾಗದ ಮಹಿಳೆಯೊಬ್ಬರಿಗೆ ಹೊಟ್ಟೆ ನೋವು ಕಾಣಿಸುತ್ತಿತ್ತು. ತಪಾಸಣೆ ನಡೆಸಿದಾಗ ಗರ್ಭದಲ್ಲಿ ಗಡ್ಡೆ ಬೆಳೆದಿರುವುದು ಗೊತ್ತಾಗಿತ್ತು. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಆ ಮಹಿಳೆ ದೊಡ್ಡ ಆಸ್ಪತ್ರೆಯ ಕಡೆ ಹೋಗಿರಲಿಲ್ಲ. ಗಡ್ಡೆ ಬೆಳವಣಿಗೆ ಆದಂತೆ ಮಹಿಳೆಯ ಸಮಸ್ಯೆಯೂ ದೊಡ್ಡದಾಯಿತು. ಹೀಗಾಗಿ ಅವರು ಅನಿವಾರ್ಯವಾಗಿ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ಬಂದರು. ದೊಡ್ಡ ಗಡ್ಡೆ ನೋಡಿದ ವೈದ್ಯರು ದೊಡ್ಡ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು.
ಆಗ, ಆ ಮಹಿಳೆ ತಮ್ಮ ಸಮಸ್ಯೆಯನ್ನು ಹೇಳಿದರು. ಜೊತೆಗೆ ಕೈಯಲ್ಲಿ ಕಾಸಿಲ್ಲದ ವಿಷಯವನ್ನು ಪ್ರಸ್ತಾಪಿಸಿದರು. ಮಹಿಳೆಯ ಸಂಕಷ್ಟ ಅರಿತ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸಾಹಸಕ್ಕೆ ಮುಂದಾದರು. ಆ ಮಹಿಳೆಯ ಮೇಲೆ ಡಾ ಪದ್ಮಿನಿ ಪೈ ಅವರು ಅನಸ್ತೇಶಿಯಾ ಪ್ರಯೋಗ ಮಾಡಿದರು. ಡಾ ನೇತ್ರಾವತಿ ಶಿರಸಿಕರ್ ಅವರು ಒಂದು ತಾಸುಗಳ ಕಾಲ ನಿರಂತರ ಶಸ್ತç ಚಿಕಿತ್ಸೆ ನಡೆಸಿದರು. ಡಾ ಮಹೇಶ ಹೆಗಡೆ, ಡಾ ವಿನಾಯಕ ತಂಬದಮನೆ ಜೊತೆ ಅಲ್ಲಿನ ಸಿಬ್ಬಂದಿಯೂ ಚಿಕಿತ್ಸೆಗೆ ಸಹಕರಿಸಿದ್ದು, ಎಲ್ಲರೂ ಸೇರಿ ಗರ್ಭದೊಳಗೆ ಅಡಗಿದ್ದ ಗಡ್ಡೆಯನ್ನು ಹೊರತೆಗೆದರು.
ಆ ಗಡ್ಡೆ 5.6 ಕೆಜಿಯಷ್ಟು ದೊಡ್ಡದಾಗಿತ್ತು. ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಮೊದಲ ಬಾರಿಗೆ ಇಷ್ಟು ದೊಡ್ಡದ ಗಡ್ಡೆ ಗರ್ಭದಿಂದ ಹೊರ ಬಂದಿತ್ತು. ಸದ್ಯ ಆ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ತಮ್ಮ ಹೊಟ್ಟೆಯೊಳಗಿನ ನೋವು ದೂರ ಮಾಡಿದ ವೈದ್ಯರಿಗೆ ಮಹಿಳೆ ಕೃತಜ್ಞತೆ ಹೇಳಿದ್ದಾರೆ.