ಯಲ್ಲಾಪುರದ ಕಣ್ಣಿಗೇರಿ ಹಾಗೂ ಕಾಳಮ್ಮನಗರದಲ್ಲಿ ಕಳ್ಳತನ ನಡೆದಿದೆ. ಕಾಳಮ್ಮ ನಗರದಲ್ಲಿ ಕಳ್ಳರು ಸ್ಕೂಟಿ ಕದ್ದಿದ್ದಾರೆ. ಕಣ್ಣಿಗೇರಿಯಲ್ಲಿ ಮನೆಯೊಳಗೆ ನುಗ್ಗಿ ಆಭರಣ ದೋಚಿದ್ದಾರೆ.
ಯಲ್ಲಾಪುರದ ಕಾಳಮ್ಮ ನಗರದ ಅಡಿಕೆ ವ್ಯಾಪಾರಿ ರಾಘವೇಂದ್ರ ಭಟ್ಟ ಅವರು ತಮ್ಮ ಸ್ಕೂಟರ್ ಕಳೆದುಕೊಂಡಿದ್ದಾರೆ. ಅಕ್ಟೊಬರ್ 15ರಂದು ಅವರ ಮನೆ ಮುಂದೆ ನಿಲ್ಲಿಸಿದ ಸ್ಕೂಟರ್ ಕಳ್ಳತನವಾಗಿದ್ದು, ಎಲ್ಲಾ ಕಡೆ ಹುಡುಕಿದರೂ ಸಿಗದ ಕಾರಣ ಈ ದಿನ ಅವರು ಪೊಲೀಸ್ ದೂರು ನೀಡಿದ್ದಾರೆ. `ಟಿವಿಎಸ್ ಜುಪಿಟರ್ ಮಾದರಿಯ ಸ್ಕೂಟರ್ ಹುಡುಕಿ ಕೊಡಿ’ ಎಂದವರು ಮನವಿ ಮಾಡಿದ್ದಾರೆ.
ಕಣ್ಣಿಗೇರಿಯ ಸಾರಬೈಲಿನ ಮಿಲಾಗ್ರಿ ವಾಜ್ ಅವರ ಮನೆಯಲ್ಲಿ ನವೆಂಬರ್ 1ರಂದು ಕಳ್ಳತನ ನಡೆದಿದೆ. ನವೆಂಬರ್ 2ರ ಮಧ್ಯಾಹ್ನ ಮನೆಯೊಳಗೆ ಪ್ರವೇಶಿಸಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯ ಹಂಚು ತೆಗೆದ ಕಳ್ಳರು ಕಪಾಟಿನ ಪಕ್ಕದಲ್ಲಿದ್ದ ಚಾವಿ ಬಳಸಿ ಕಪಾಡು ತೆರೆದಿದ್ದಾರೆ. ಅದಾದ ನಂತರ ಅಲ್ಲಿದ್ದ ಕಿವಿಯೊಲೆ, ಕರಿಮಣಿ ಸರ, ಕಾಲ್ಗೆಜ್ಜೆ ಸೇರಿ 1.13 ಲಕ್ಷ ರೂ ಮೌಲ್ಯದ ಆಭರಣ ಅಪಹರಿಸಿದ್ದಾರೆ. ಅವರು ಸಹ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಳ್ಳರ ಪತ್ತೆಗೆ ಒತ್ತಾಯಿಸಿದ್ದಾರೆ.