ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ತುರ್ತು ಸಹಾಯವಾಣಿ ಕಲ್ಪಿಸಿದೆ. ತಮಗಾಗುವ ಅನ್ಯಾಯ, ದೌರ್ಜನ್ಯ ಸೇರಿ ಯಾವುದೇ ಬಗೆಯ ಸಹಾಯಕ್ಕಾಗಿ ಮಹಿಳೆಯರು 181ಗೆ ಫೋನ್ ಮಾಡಿ ಸಮಸ್ಯೆ ಹೇಳಬಹುದಾಗಿದ್ದು, ತುರ್ತು ಸನ್ನಿವೇಶದಲ್ಲಿ ಅಧಿಕಾರಿಗಳ ತಂಡ ನೆರವಿಗೆ ಬರಲಿದೆ.
`ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ಸಹಾಯವಾಣಿಗೆ ಫೋನ್ ಮಾಡಬಹುದಾಗಿದ್ದು, ಈ ಕರೆ ಸಂಪೂರ್ಣ ಉಚಿತ’ ಎಂದು ಡೀಸಿ ಕೆ ಲಕ್ಷ್ಮೀಪ್ರಿಯ ಅವರು ಅರಿವು ಮೂಡಿಸಿದ್ದಾರೆ. `ಮಹಿಳೆಯರು ತಮ್ಮ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ, ಲೈಂಗಿಕ ಹಿಂಸೆ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಗಳಿಗೆ ಇಲ್ಲಿ ಫೋನ್ ಮಾಡಬಹುದಾಗಿದೆ. ನೊಂದ ಮಹಿಳೆಯರಿಗೆ ಕಾನೂನು ನೆರವು, ವೈದ್ಯಕೀಯ ನೆರವು, ಪೊಲೀಸ್ ನೆರವು ಹಾಗೂ ಸಮಾಲೋಚನೆಗೆ ಸರ್ಕಾರ ಬದ್ಧವಿದೆ’ ಎಂದವರು ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಮೂಲಕ ಪ್ರಸಕ್ತ ಸಾಲಿನಲ್ಲಿ ಸೆಪ್ಟಂಬರಿನವರೆಗೆ 74 ಪ್ರಕರಣಗಳು ದಾಖಲಾಗಿದೆ. ಸಾಂತ್ವನ ಯೋಜನೆಯ ಮೂಲಕ ನೊಂದ ಮಹಿಳೆಯರಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅಗತ್ಯ ನೆರವು ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಮಾಹಿತಿ ನೀಡಿದ್ದಾರೆ. `ಸಹಾಯವಾಣಿ ಹಾಗೂ ಸಾಂತ್ವಾನ ಕೇಂದ್ರದ 24*7 ಮಹಿಳೆಯರಿಗೆ ನೆರವಿಗೆ ಸ್ಪಂದಿಸಬೇಕು’ ಎಂದು ಅವರು ಸೂಚಿಸಿದ್ದಾರೆ.
`ಪ್ರಸಕ್ತ ಸಾಲಿನಲ್ಲಿ ಈ ಕೇಂದ್ರಗಳ ಮೂಲಕ 395 ದೂರುಗಳನ್ನು ಸ್ವೀಕರಿಸಿ, ಎಲ್ಲಾ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಮಹಿಳೆಯರು ನೀಡುವ ದೂರುಗಳ ಕುರಿತು ಇನ್ನಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುವ ಮೂಲಕ ತಪ್ಪು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗುವಂತೆ ನೋಡಿಕೊಳ್ಳಬೇಕು’ ಎಂದವರು ಹೇಳಿದ್ದಾರೆ. `ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತಂತೆ ರಚಿಸಲಾಗಿರುವ ಗ್ರಾಮ ಮಟ್ಟದಿಂದ ರಚಿಸಲಾಗಿರುವ ಎಲ್ಲಾ ಸಮಿತಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳು ನಡೆಯದಂತೆ ಈ ಬಗ್ಗೆ ಸಾರ್ವಜನಿಕವಾಗಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಆಯೋಜಿಸಬೇಕು. ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಪ್ರಸಕ್ತ ಸಾಲಿನಲ್ಲಿ 17 ಪೋಕ್ಸೋ ಪ್ರಕರಣಗಳು ವರದಿಯಾಗಿದ್ದು, ಶಿಶು ಅಭಿವೃಧ್ದಿ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
`ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಶೇ 100ರಷ್ಟು ಸಾಧನೆ ಆಗಬೇಕು. ತೀವ್ರ ಅಪೌಷ್ಠಿಕತೆಯಿಂದ ಬಳಸುತ್ತಿರುವ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಅಂಗನವಾಡಿಯಲ್ಲಿ ಮಕ್ಕಳಿಗೆ ನಿಗಧಿಯಂತೆ ಪೌಷ್ಠಿಕ ಆಹಾರ ನೀಡುವುದರ ಜೊತೆಗೆ ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಅಂಗನವಾಡಿಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು.