ಕಾರವಾರ ಬಸ್ ನಿಲ್ದಾಣದ ಬಳಿ ನಿಂತಿದ್ದ ಸ್ಕೂಟಿ ಕದಿಯಲು ಬಂದಿದ್ದ ಕಳ್ಳರು ಸ್ಕೂಟಿ ಮಾಲಕನನ್ನು ನೋಡಿ ಓಡಿದ್ದಾರೆ. ಸ್ಕೂಟಿ ಮಾಲಕ ಅವರನ್ನು ಹಿಡಿಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ.
Advertisement. Scroll to continue reading.
ಕಾರವಾರದ ಕೋಣೆವಾಡ ಕೋಡಿಬೀರ ದೇವಸ್ಥಾನ ಬಳಿಯ ಸಂತೋಷ ಉಳ್ವೇಕರ್ ಅವರು ನವೆಂಬರ್ 17ರಂದು ತಮ್ಮ ಹೊಂಡಾ ಆಕ್ಟಿವಾ ಸ್ಕೂಟರ್ ನಿಲ್ಲಿಸಿದ್ದರು. ಆ ಸ್ಕೂಟಿಯ ಹ್ಯಾಂಡ್ ಲಾಕ್’ನ್ನು ಮಾಡಿದ್ದರು. ಆ ದಿನ ಸಂಜೆ ಅಪರಿಚಿತರಿಬ್ಬರು ಅವರ ಸ್ಕೂಟಿ ಹಿಡಿದು ಅಲ್ಲಾಡಿಸುತ್ತಿದ್ದರು. ಹ್ಯಾಂಡ್ ಲಾಕ್ ಮುರಿದು ಸ್ಕೂಟಿ ಕದ್ದೊಯ್ಯುವ ಪ್ರಯತ್ನ ಮಾಡಿದ್ದರು.
ಅದೇ ಸಮಯಕ್ಕೆ ಸಂತೋಷ ಉಳ್ವೇಕರ್ ಅವರು ಅಲ್ಲಿಗೆ ಬಂದರು. `ಯಾರು ನೀವು? ಏನು ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದರು. ಸಂತೋಷ ಉಳ್ವೇಕರ್ ಅವರನ್ನು ನೋಡಿದ ಅವರಿಬ್ಬರು ಅಲ್ಲಿಂದ ಓಡಿ ಪರಾರಿಯಾದರು. ಅವರಿಬ್ಬರ ಬಗ್ಗೆ ಅಕ್ಕಪಕ್ಕದ ಅಂಗಡಿಗಳಲ್ಲಿ ಸಂತೋಷ ಉಳ್ವೇಕರ್ ಅವರು ವಿಚಾರಿಸಿದರು. ಆದರೆ, ಯಾರಿಗೂ ಅವರ ಪರಿಚಯವಿರಲಿಲ್ಲ. ಹೀಗಾಗಿ ಅವರಿವರಲ್ಲಿ ಚರ್ಚಿಸಿ ಸ್ಕೂಟಿ ಕದಿಯಲು ಬಂದವರ ಬಗ್ಗೆ ಪೊಲೀಸರಿಗೆ ತಿಳಿಸಿದರು. ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಅಪರಿಚಿತರಿಬ್ಬರ ಶೋಧ ಶುರು ಮಾಡಿದ್ದಾರೆ.