ಕಾರವಾರದ ಸಿದ್ದರದಿಂದ ಯಲ್ಲಾಪುರದ ಕಿರವತ್ತಿಗೆ ಕಳ್ಳ ಸಾಗಾಟವಾಗುತ್ತಿದ್ದ ಕೋಣವೊಂದನ್ನು ಪೊಲೀಸರು ಹಿಡಿದಿದ್ದಾರೆ. ಸಿಕ್ಕಿಬಿದ್ದ ಕಳ್ಳ ಕೋಣ ಸಾಗಾಟಗಾರರು ಅನಾರೋಗ್ಯದ ನೆಪ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಅವರ ನಾಟಕವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಕಾರವಾರದ ಸಿದ್ದರದಲ್ಲಿದ್ದ ಕೋಣವನ್ನು ಯಲ್ಲಾಪುರದ ಕಿರವತ್ತಿಯ ಅಣ್ಣಪ್ಪ ಗೌಡಪ್ಪ ನಾಯ್ಕ (35), ಶಿವಾನಂದ ಬಸವಣ್ಣೆಪ್ಪ ರೋಟಗೋಡ ಅವರು ಅಪಹರಿಸಿದ್ದರು. ಕಾರವಾರದ ಖಾರ್ಗೆಜೂಗದ ಶೈಲೇಶ್ ಮಹಾಭಲೇಶ್ವರ ನಾಯ್ಕ ಹಾಗೂ ಪರಶುರಾಮ ಮನೋಹರ ಮಾಂಜೇಕರ ಅವರು ಆ ಕಳ್ಳರ ಜೊತೆ ಕೈ ಜೋಡಿಸಿದ್ದರು. ಅವರೆಲ್ಲರೂ ಸೇರಿ ಟಾಟಾ ಇಂಟ್ರಾ ವಾಹನದಲ್ಲಿ ಕೋಣವನ್ನು ತುಂಬಿದ್ದರು.
ಅನುಮಾನಾಸ್ಪದ ವಾಹನದ ಓಡಾಟದ ಬಗ್ಗೆ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಶನಿವಾರ ರಾತ್ರಿ ಕೋಣ ಕದ್ದು ಸಾಗಾಟ ಮಾಡುವಾಗ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಐಟಿಐ ಕಾಲೇಜಿನ ಬಳಿ ಆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ವಾಹನ ತಪಾಸಣೆ ನಡೆಸಿದಾಗ ಕೋಣ ಸಾಗಾಟಕ್ಕೆ ಅನುಮತಿ ಪತ್ರ ಇರಲಿಲ್ಲ. ಆ ಕೋಣಕ್ಕೆ ಆಹಾರ ನೀರು ಕೊಡದೇ ಸಾಗಿಸುತ್ತಿರುವುದು ಕಾಣಿಸಿತು.
ಪೊಲೀಸರು ಆ ಎಲ್ಲರನ್ನು ವಶಕ್ಕೆಪಡೆದರು. ಈ ವೇಳೆ ಆರೋಪಿತರು ಅನಾರೋಗ್ಯದ ನೆಪ ಮಾಡಿದರು. `ಆಸ್ಪತ್ರೆಗೆ ಹೋಗಬೇಕು’ ಎಂದು ಸುಳ್ಳು ಹೇಳಿದರು. ಆದರೆ, ಅದು ಸತ್ಯವಲ್ಲ ಎಂಬುದು ಸ್ಥಳೀಯರಿಗೆ ಅರಿವಾಯಿತು. ಕೋಣವನ್ನು ವಶಕ್ಕೆಪಡೆದ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಜರುಗಿಸಿದರು.