ಉತ್ತರ ಕನ್ನಡ ಜಿಲ್ಲೆಯ ಅಳಿವು-ಉಳಿವಿನ ಬಗ್ಗೆ ಶಿರಸಿಯ TSS ಭವನದಲ್ಲಿ ಭಾನುವಾರ ವಿಚಾರಘೋಷ್ಠಿ ನಡೆದಿದ್ದು, ಯೋಜನೆಯ ಆಳ-ಅಗಲ ಅರಿಯಬೇಕಾಗಿದ್ದ ಜನಪ್ರತಿನಿಧಿಗಳೊಬ್ಬರೂ ಸಭೆಯಲ್ಲಿ ಕಾಣಲಿಲ್ಲ. ವಿವಿಧ ಯೋಜನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಡೆದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಿಸಿ ಅಧಿಕೃತ ಆಮಂತ್ರಣ ನೀಡಿದರೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.
ಸಂಸದ ವಿಶ್ವೇಶ್ವರ ಹೆಗಡೆ, ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ, ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿತ್ತು. ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿ ಅವರಿಗೆಲ್ಲರಿಗೂ ಆಮಂತ್ರಣ ನೀಡಲಾಗಿತ್ತು. ಆದರೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ದೆಹಲಿಯಲ್ಲಿರುವುದಾಗಿ ಹೇಳಿದರು. ಶಿವರಾಮ ಹೆಬ್ಬಾರ್ ಅವರು ಶುಭ ಸಂದೇಶ ಕಳುಹಿಸಿ ಸುಮ್ಮನಾದರು. ಶಾಂತರಾಮ ಸಿದ್ದಿ ಅವರು ಧಾರವಾಡಕ್ಕೆ ಹೋಗಿದ್ದು, ಇಲ್ಲಿನ ಕಾರ್ಯಕ್ರಮದಿಂದ ದೂರವುಳಿದರು. ಭೀಮಣ್ಣ ನಾಯ್ಕ ಅವರು ಎಪಿಎಂಸಿ ಆವರಣದಲ್ಲಿರುವ TMS ಸಭಾ ಭವನಕ್ಕೆ ಆಗಮಿಸಿದಾದರೂ TSS ಭವನಕ್ಕೆ ಕಾಲಿಡಲಿಲ್ಲ.
ಸೋಂದಾದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯವರು ಪಶ್ಚಿಮಘಟ್ಟ ‘ನದಿ ಕಣಿವೆ ಸಂರಕ್ಷಣೆ ಹಾಗೂ ಬೃಹತ್ ಯೋಜನೆ ದುಷ್ಪರಿಣಾಮ’ ಎಂಬ ವಿಷಯದ ಕುರಿತು ವಿಚಾರಘೋಷ್ಠಿ ಆಯೋಜಿಸಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಣಾ ಸಾಮರ್ಥ್ಯವನ್ನು ಮೀರಿ ವಿವಿಧ ಯೋಜನೆ ಅನುಷ್ಠಾನದಿಂದ ಆಗುವ ಅನಾಹುತಗಳ ಬಗ್ಗೆ ತಜ್ಞರು ಮಾತನಾಡಿದರು. ಬೇಡ್ತಿ-ವರದಾ ನದಿ ಜೋಡಣೆ, ಕೇಣಿ ವಾಣಿಜ್ಯ ಬಂದರು ನಿರ್ಮಾಣ, ಶರಾವತಿ ಭೂಗತ ವಿದ್ಯುತ್ ಯೋಜನೆ, ಅಘನಾಶಿನಿ-ವೇದಾವತಿ ನದಿ ತಿರುವು ಸೇರಿ ಹಲವು ಯೋಜನೆಗಳ ಬಗ್ಗೆ ತಜ್ಞರು ವಿವರಿಸಿದರು. ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಸಲಾದ ಜನಪ್ರತಿನಿಧಿಗಳನ್ನುಹೊರತುಪಡಿಸಿ ಉಳಿದವರೆಲ್ಲರೂ ಸಭೆಯಲ್ಲಿದ್ದರು. ಯೋಜನೆ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಬೇಕಿದ್ದ ಶಾಸಕ-ಸಂಸದರು ಕಾರ್ಯಕ್ರಮದ ಶುಭ ಹಾರೈಕೆಯ ಪತ್ರ ಬರೆಯಲು ಮಾತ್ರ ಸೀಮಿತರಾದರು!
ಪರಿಸರ ತಜ್ಞರಾದ ಶಿವಾನಂದ ಕಳವೆ, ಪ್ರಕಾಶ ಮೇಸ್ತ, ವಿ ಎನ್ ನಾಯಕ, ಬಾಲಚಂದ್ರ ಸಾಯಿಮನೆ, ನರಸಿಂಹ ಹೆಗಡೆ ವಾನಳ್ಳಿ, ವಿಕಾಸ ತಾಂಡೇಲ ಅವರ ಜೊತೆ ದೂರ ದೂರದ ಊರಿನಿಂದ ಬಂದಿದ್ದ ಕಿಶೋರ ಕುಮಾರ ಹೊಂಗಡಹೊಳ್ಳ, ಗಿರಿಧರ ಕುಲಕರ್ಣಿ, ಡಾ ಅಮಿತ ಹೆಗಡೆ, ಗಿರೀಶ ಜನ್ನೆ, ಟಿಬಿ ರಾಮಚಂದ್ರ ಮೊದಲಾದವರು ತಮ್ಮ ಅಭಿಪ್ರಾಯ ಮಂಡಿಸಲು ಆಸಕ್ತರಾಗಿದ್ದರು. ಆದರೆ, ಆ ಅಭಿಪ್ರಾಯಗಳನ್ನು ಆಲಿಸಿ-ಸಂಗ್ರಹಿಸಿ ಸರ್ಕಾರದ ಮೇಲೆ ಒತ್ತಡ ತರಬೇಕಾದ ಶಾಸಕ-ಸಂಸದರು ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ‘ನದಿಗಳು ಭೂಮಿಯ ನರನಾಡಿಗಳಾಗಿದ್ದು, ನದಿ ಹರಿವು ಬದಲಾದರೆ ಅಪಾಯ ನಿಶ್ಚಿತ. ನದಿ ಸಹಜವಾಗಿದ್ದರೆ ಪರಿಸರ ಸಮತೋಲನ ಸಾಧ್ಯ’ ಎಂದು ಈ ಸಭೆಗೆ ಚಾಲನೆ ನೀಡಿದ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ‘ಸರ್ಕಾರ ಐದು ವರ್ಷ ಬಂದು ಹೋಗುತ್ತವೆ. ಆ ಐದು ವರ್ಷದಲ್ಲಿ 50 ವರ್ಷದ ಸಂಪಾದನೆ ಮಾಡುತ್ತವೆ. ಆದರೆ, ನಾವು ಇಲ್ಲಿಯೇ ಬದುಕಬೇಕು. ಅದಕ್ಕಾಗಿ ಪರಿಸರ ಉಳಿವಿಗಾಗಿ ಹೋರಾಟ ಮಾಡಬೇಕು’ ಎಂದು ಕರೆ ನೀಡಿದ ಶ್ರೀಗಳು ಸರ್ಕಾರ ಹಾಗೂ ರಾಜಕಾರಣಿಗಳ ಮನಸ್ಥಿತಿಯ ಬಗ್ಗೆ ತೀಕ್ಷ್ಣವಾಗಿ ತಿಳಿಸಿದರು. ನದಿ ತಿರುವು ಯೋಜನೆಗಳ ಅಪಾಯ ವಿವರಿಸಿದ ಅವರು ಎತ್ತಿನಹೊಳೆ ಯೋಜನೆ ವಿಫಲವಾದ ಉದಾಹರಣೆಯನ್ನು ವಿವರಿಸಿದರು.
‘ಗುತ್ತಿಗೆದಾರರ ಒತ್ತಡದಿಂದ ಸರ್ಕಾರ ಇಂಥ ಅವೈಜ್ಞಾನಿಕ ಯೋಜನೆ ರೂಪಿಸಲು ಮುಂದಾಗಿದೆ. ಯಾವ ಸರ್ಕಾರ ಬಂದರೂ ಇಂಥ ಯೋಜನೆ ನಿಲ್ಲಿಸುತ್ತಿಲ್ಲ. 25 ಸಾವಿರ ಕೋಟಿ ರೂಪಾಯಿಯ ಯೋಜನೆಗಳು ಲಕ್ಷ ಕೋಟಿ ರೂ ದಾಡುತ್ತಿವೆ. ಇಂಥ ಯೋಜನೆಗಳ ಹಿಂದಿರುವ ಕಾಣದ ಕೈ ಗುತ್ತಿಗೆ ಮಾಫಿಯಾ’ ಎಂದು ವಾಲ್ಮಿ ನೀರಾವರಿ ಸಂಸ್ಥೆಯ ನಿವೃತ್ತ ನಿರ್ದೇಶಕ ರಾಜೇಂದ್ರ ಪೊದ್ದಾರ್ ಅವರು ವಿವರಿಸಿದರು.
ಭೂಗರ್ಭ ಶಾಸ್ತ್ರಜ್ಞ ಶ್ರೀನಿವಾಸ ರೆಡ್ಡಿ ಅವರು ‘ಮುಂದಿನ ದಿನದಲ್ಲಿ ಇಲ್ಲಿಯೇ ನೀರು ಕಡಿಮೆ ಆಗುವ ಸಾಧ್ಯತೆಗಳಿವೆ. ಹೀಗಿರುವಾಗ ಇಲ್ಲಿನ ನೀರನ್ನು ಬೇರೆ ಕಡೆ ಒಯ್ಯುವ ಯೋಜನೆ ಸರಿಯಲ್ಲ’ ಎಂದು ವಿವರಿಸಿದರು. ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂ ಕಂಪನ, ಭೂ ಕುಸಿತ ಹಾಗೂ ಸಿಡಿಲಿನ ಪ್ರಭಾವದ ಬಗ್ಗೆ ಅವರು ವೈಜ್ಞಾನಿಕ ಕಾರಣ ತೆರೆದಿಟ್ಟರು.