ಜೊಯಿಡಾದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹೋರಾಟಕ್ಕೆ ನಿರ್ಧರಿಸಿದೆ. ನವೆಂಬರ್ 10ರಂದು ಕಿರವತ್ತಿಯಿಂದ ಜೊಯಿಡಾದವರೆಗೆ ಪಾದಯಾತ್ರೆ ನಡೆಸಿ ಹಗಲು-ರಾತ್ರಿ ಧರಣಿ ನಡೆಸಲು ಉದ್ದೇಶಿಸಲಾಗಿದೆ.
`ರಾಜ್ಯದಲ್ಲಿ ಅತಿ ಹಿಂದುಳಿದ ತಾಲೂಕು ಎಂದು ಜೊಯಿಡಾ ಗುರುತಿಸಿಕೊಂಡಿದೆ. ತಾಲೂಕು ಅಭಿವೃದ್ಧಿಗೆ 25 ವರ್ಷದಿಂದ ಹೋರಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಿರಂತರ ಸತ್ಯಾಗ್ರಹ ಅನಿವಾರ್ಯ’ ಎಂದು ಸಂಘಟಕರು ಹೇಳಿದ್ದಾರೆ. `ಕಿರವತ್ತಿ, ಕಾರಬೋಳಿ, ಡಿಗ್ಗಿ ಗೋವಾ ಗಡಿ ರಾಜ್ಯ ಹೆದ್ದಾರಿ ರಸ್ತೆ ಮತ್ತು ಸೇತುವೆ ಸುಧಾರಣೆ, ಡಿಗ್ಗಿ ಮುಖ್ಯ ರಸ್ತೆಯಿಂದ ವಾಗೇಲಿ ರಸ್ತೆ ಮರು ಡಾಂಬರೀಕರಣ, ಕಿರವತ್ತಿ, ತೆರಾಳಿ, ಶಿಸೈ, ದುಧಮಳಾ ರಸ್ತೆ ಡಾಂಬರಿಕರಣ ಮತ್ತು ಸೇತುವೆ ನಿರ್ಮಾಣ, ಡಿಗ್ಗಿ ಮುಖ್ಯ ರಸ್ತೆ ಯಿಂದ ಕಸಂಬಾ ರಸ್ತೆ ನಿರ್ಮಾಣ, ಜೊಯಿಡಾ ಕಾರಟೋಳಿ ವಸತಿ ಬಸ್, ಜೊಯಿಡಾ ಕುಂಡಲ ವಸತಿ ಬಸ್, ಕಾರಟೋಳಿ ಹೊಸ ನ್ಯಾಯ ಬೇಲೆ ಅಂಗಡಿ, ಗಾಂಗೋಡಾ ರಸ್ತೆ ಡಾಂಬರೀಕರಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟಗಾರರು ಆಗ್ರಹಿಸಿದ್ದಾರೆ.
`ವನ್ಯಜೀವಿ ವಿಭಾಗದಿಂದ ಅಭಿವೃದ್ಧಿ ಕೆಲಸಕ್ಕೆ ತೊಂದರೆ ನೀಡಬಾರದು. ಜೊಯಿಡಾ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಕೊಡಬೇಕು. ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ನೀಡಬೇಕು. ಕುಣಬಿ ಜನಾಂಗ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ಅಲ್ಲಿನ ಪ್ರೇಮಾನಂದ ವೇಳಿಪ ಹಾಗೂ ರಾಜೇಶ್ ಗಾವಡಾ ಆಗ್ರಹಿಸಿ ತಹಶೀಲ್ದಾರ್ ಕಚೇರಿಗೆ ಪತ್ರ ನೀಡಿದ್ದಾರೆ.