ಕರಾವಳಿ ಉತ್ಸವದ ಅಂಗವಾಗಿ ಕಾರವಾರದ ಮಾಲಾದೇವಿ ಮೈದಾನದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ನಾನಾ ಭಾಗದ ನಾಯಿಗಳು ಬಂದಿದ್ದು, ಅವುಗಳ ಜಾಣ್ಮೆ, ಚುರುಕುತನ ಹಾಗೂ ಸಾಹಸಕ್ಕೆ ಜನ ಹುಬ್ಬೇರಿಸಿದ್ದಾರೆ. ಲ್ಯಾಬ್ರಾಡರ್, ಜರ್ಮನ್ ಶೆಪರ್ಡ್, ಗೋಲ್ಡನ್ ರಿಟ್ರಿವರ್, ಮುಧೋಳ ಹೌಂಡ್, ಪೊಮೇರಿಯನ್, ವೇನಸ್ ಕಾರ್ಗಿ, ರಾಜ ಪಾಳ್ಯಮ್, ಬೆಲ್ಜಿಯನ್ ಮೆಲಿನಯ್ಸ್ ಸೇರಿ ವಿವಿಧ ತಳಿಯ ನಾಯಿಗಳು ಸಹ ಈ ಉತ್ಸವದಲ್ಲಿ ಪ್ರತಿಭಾ ಪ್ರದರ್ಶನ ಮಾಡಿವೆ.
ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಕೈಗಾದ ಕೈಗಾರಿಕಾ ಭದ್ರತಾ ಪಡೆಯ ಶ್ವಾನಗಳು ತಮ್ಮ ಸಾಹಸ, ಬುದ್ದಿವಂತಿಕೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಿವೆ. ಪೊಲೀಸ್ ಇಲಾಖೆಯ ಶೈನಿ, ಮಾರ್ವೆಲ್ ಮತ್ತು ಅಖಿರ ಹೆಸರಿನ ಶ್ವಾನಗಳು ಶಿಸ್ತಿನ ಆದೇಶಗಳನ್ನು ಪ್ರದರ್ಶಿಸಿದವು. ಕೈಗಾರಿಕಾ ಭದ್ರತಾ ಪಡೆಯ ಐರಾ, ಅಭಯ್ ಮತ್ತು ಭೈರವ ಶ್ವಾನಗಳು ರೋಮಾಂಚಕ ಸಾಹಸ ಚಟುವಟಿಕೆ ನಡೆಸಿದವು. ಈ ಎರಡೂ ಇಲಾಖೆಗಳ ಶ್ವಾನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು 10 ಸಾವಿರ ರೂ ಬಹುಮಾನ ಕೊಟ್ಟರು.
ಬೆಂಗಳೂರಿನಿAದ ಆಗಮಿಸಿದ್ದ ಕುಮಾರ್ ಅವರ 2 ಶ್ವಾನಗಳು ವಿವಿಧ ಆಕರ್ಷಕ ಬುದ್ದಿವಂತ ಚಟುವಟಿಕೆಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದವು. ಶ್ವಾನ ಪ್ರದರ್ಶನದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಶ್ವಾನಗಳು ಭಾಗವಹಿಸಿದ್ದು, ಚಾಂಪಿಯನ್ ವಿಭಾಗದಲ್ಲಿ ವಿಜೇತವಾದ ಶ್ವಾನಗಳಿಗೆ ಮತ್ತು ಪ್ರತಿ ವಿಭಾಗದಲ್ಲೂ ವಿಜೇತವಾದ ಶ್ವಾನಗಳಿಗೆ ಬಹುಮಾನ ವಿತರಿಸಲಾಯಿತು. ಈ ಶ್ವಾನ ಸ್ಪರ್ಧೆಯಲ್ಲಿ ಸುನೀಲ್ ಉಡಾಡಿ ಅವರ ಜರ್ಮನ್ ಶೆಫರ್ಡ್ ಪ್ರಥಮ ಬಹುಮಾನ ಪಡೆದಿದ್ದು, 25 ಸಾವಿರ ರೂ ತನ್ನದಾಗಿಸಿಕೊಂಡಿತು. ವೆಂಕಪ್ಪ ನವಲಗಿ ಮುಧೋಳ ಅವರ ಮುಧೋಳ ತಳಿ ಶ್ವಾನಕ್ಕೆ ದ್ವಿತೀಯ ಬಹುಮಾನ 15,000ರೂ ಮತ್ತು ಸುಹಾಸ್ ದಾವಣಗೆರೆ ಅವರ ಬೀಗಲ್ ತಳಿ ಶ್ವಾನಕ್ಕೆ ತೃತೀಯ ಬಹುಮಾನವಾಗಿ 10,000 ರೂ ಸಿಕ್ಕಿತು.