ಕುಡಿತದ ಚಟಕ್ಕೆ ಒಳಗಾಗಿದ್ದ ಹೊನ್ನಾವರದ ರಾಘವೇಂದ್ರ ನಾಯ್ಕ ಅವರು ತಮ್ಮ ವ್ಯಸನ ಹೆಚ್ಚಾದ ಪರಿಣಾಮ ಸಾವನಪ್ಪಿದ್ದಾರೆ. ಅಸ್ವಸ್ಥರಾಗಿ ಕುಸಿದು ಬಿದ್ದ ಅವರನ್ನು ಮೂರು ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಹೊನ್ನಾವರ ಕುದ್ರಗಿಯಲ್ಲಿ ರಾಘವೇಂದ್ರ ಶಂಕರ ನಾಯ್ಕ (40) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದು, ದುಡಿಮೆಯ ಹಣವನ್ನು ಸರಾಯಿ ಅಂಗಡಿಗೆ ಸುರಿಯುತ್ತಿದ್ದರು. ಅವರ ಕುಡಿತದ ಚಟ ಮಿತಿ ಮೀರಿದ್ದು, ಯಾರಿಂದಲೂ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿರಲಿಲ್ಲ. ಕುಟುಂಬದವರು ಹೇಳಿದರೂ ಸಹ ರಾಘವೇಂದ್ರ ನಾಯ್ಕ ಅವರು ಕುಡಿಯುವುದನ್ನು ಮಾತ್ರ ಬಿಡುತ್ತಿರಲಿಲ್ಲ.
ಡಿಸೆಂಬರ್ 24ರಂದು ಮದ್ಯದ ನಶೆಯಲ್ಲಿರುವಾಗಲೇ ಅವರು ಅಸ್ವಸ್ಥರಾದರು. ಮನೆ ಗೇಟಿನ ಬಳಿ ಏಕಾಏಕಿ ಕುಸಿದು ಬಿದ್ದರು. ರಾಘವೇಂದ್ರ ನಾಯ್ಕ ಅವರನ್ನು ಕುಟುಂಬದವರು ಹೊನ್ನಾವರ ಆಸ್ಪತ್ರೆಗೆ ಕರೆದೊಯ್ದರು. ನಂತರ ಕಾರವಾರ ಆಸ್ಪತ್ರೆಗೆ ದಾಖಲಿಸಿದರು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಡಿಸೆಂಬರ್ 25ರ ರಾತ್ರಿ ರಾಘವೇಂದ್ರ ನಾಯ್ಕ ಅವರು ಆಸ್ಪತ್ರೆಯಲ್ಲಿಯೇ ಸಾವನಪ್ಪಿದರು. ಚಿಕ್ಕಪ್ಪನ ಸಾವಿನ ಬಗ್ಗೆ ಆಟೋ ಚಾಲಕ ವಿನಾಯಕ ಮಂಜುನಾಥ ನಾಯ್ಕ ಅವರು ಮಾಹಿತಿ ನೀಡಿದ್ದು, ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದರು.
`ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ’