ರೈತನ ಜೀವನಕ್ಕೆ ಆಧಾರವಾಗಿದ್ದ ಅಡಿಕೆ ಮರಗಳನ್ನು ಅರಣ್ಯಾಧಿಕಾರಿಗಳು ಕಟಾವು ಮಾಡಿದಕ್ಕೆ ಎಲ್ಲಡೆ ಆಕ್ರೋಶವ್ಯಕ್ತವಾಗುತ್ತಿದೆ. ಅರಣ್ಯಾಧಿಕಾರಿಗಳ ವಿರುದ್ಧ ಜನ ಸಿಡಿದೆದ್ದಿದ್ದು, ಉಗ್ರ ಸ್ವರೂಪದ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
Advertisement. Scroll to continue reading.
ಸಿದ್ದಾಪುರದ ಬಿಳಗಿ ಬಳಿ ಅರಣ್ಯ ಇಲಾಖೆಯವರು ನೂರಾರು ಅಡಿಕೆ ಮರಗಳನ್ನು ಕಡಿದು ನಾಶ ಮಾಡಿದ್ದಾರೆ. ಆತಂಕದಲ್ಲಿರುವ ಆ ಭಾಗದ ಜನ ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ. ಲಕ್ಷಾಂತರ ರೂ ನಷ್ಟ ಅನುಭವಿಸಿದ ಗಣೇಶ ಹೆಗಡೆ ಅವರು ತಲೆ ಮೇಲೆ ಕೈ ಹೊತ್ತು ಕೂತಿದ್ದು, ಅನೇಕ ಹೋರಾಟಗಾರರು ಅವರಿಗೆ ಧೈರ್ಯ ಹೇಳಿದ್ದಾರೆ. ಅರಣ್ಯ ಇಲಾಖೆಯ ನಡೆಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅವರು ಖಂಡಿಸಿದ್ದಾರೆ.
ಏಕಾಏಕಿ ಬಡ ರೈತನ ತೋಟಕ್ಕೆ ನುಗ್ಗಿ ಫಲ ಕೊಡುವ ಅಡಿಕೆ ಮರಗಳನ್ನು ಅಧಿಕಾರಿಗಳು ಕಡಿದದಕ್ಕೆ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪದೇ ಪದೇ ದೌರ್ಜನ್ಯ ಮಾಡುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫಲರಾದ ಜನಪ್ರತಿನಿಧಿಗಳ ವಿರುದ್ಧವೂ ಕರ್ನಾಟಕ ಪ್ರಾಂತ ರೈತ ಸಂಘದವರು ಅಸಮಧಾನವ್ಯಕ್ತಪಡಿಸಿದ್ದಾರೆ. `ತಪ್ಪು ಮಾಡಿರುವ ಅರಣ್ಯ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಶಾಂತಾರಾಮ ನಾಯಕ ಅವರು ಒತ್ತಾಯಿಸಿದ್ದಾರೆ. `ಜನವರಿಯಲ್ಲಿ ನಡೆಯುವ ಜಿಲ್ಲಾ ಸಮ್ಮೇಳನದಲ್ಲಿ ಈ ಬಗ್ಗೆ ಚರ್ಚಿಸಿ ಹೋರಾಟ ರೂಪಿಸಲಾಗುತ್ತದೆ’ ಎಂದವರು ಹೇಳಿದ್ದಾರೆ.