ಶಿರಸಿಗೆ ಬಂದಿದ್ದ ಹಿರಿಯ ಚಿತ್ರನಟ ಎಸ್ ದೊಡ್ಡಣ್ಣ ಅವರು ಬೆಟ್ಟಕೊಪ್ಪ ಊರು ನೋಡಿದ್ದಾರೆ. ನಮ್ಮನೆ ಹಬ್ಬದಲ್ಲಿ ಭಾಗವಹಿಸಿದ ಅವರು ಇಲ್ಲಿನ ಆಚಾರ-ವಿಚಾರವನ್ನು ಆಹ್ವಾದಿಸಿದ್ದಾರೆ.
`ಶುದ್ಧ ಪರಿಸರ ಹೊಂದಿರುವ ಹಳ್ಳಿಗಳು, ಇಲ್ಲಿ ನಡೆಯುವ ಸಾಂಸ್ಕೃತಿಕ ಹಬ್ಬಗಳು ಸ್ವರ್ಗಕ್ಕೆ ಸಮಾನವಾದ ವಾತಾವರಣ ಸೃಷ್ಟಿಸುತ್ತವೆ’ ಎಂದವರು ಹೇಳಿದ್ದಾರೆ. `ಬೆಂಗಳೂರಿನoತಹ ಮಹಾನಗರಗಳು ಸಂಚಾರ ದಟ್ಟಣೆ, ವಾಯಮಾಲಿನ್ಯದ ಕಾರಣಗಳಿಂದ ನರಕವಾಗುತ್ತಿವೆ. ಆ ನರಕದಿಂದ ಹೊರಬರಲು ಹಳ್ಳಿಗೆ ಬರಬೇಕು. ಹಳ್ಳಿಯ ವಾತಾವರಣದಲ್ಲೇ ನೆಮ್ಮದಿ ಲಭ್ಯ’ ಎಂದು ಅವರು ಹಳ್ಳಿ ಜೀವನದ ಬಗ್ಗೆ ಸಂತಸವ್ಯಕ್ತಪಡಿಸಿದ್ದಾರೆ.
ಬೆಟ್ಟಕೊಪ್ಪದ ನಮ್ಮನೆ ವೇದಿಕೆಯಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಆಯೋಜಿಸಿದ್ದ ವಿಶ್ವಶಾಂತಿ ಸರಣಿಯ 11ನೇ ಯಕ್ಷನೃತ್ಯ ರೂಪಕ ವಂದೇ ಗೋವಿಂದಮ್ ಲೋಕಾರ್ಪಣೆ, ನಮ್ಮನೆ ಪ್ರಶಸ್ತಿ, ಪುರಸ್ಕಾರ ಪ್ರದಾನ ಕಾರ್ಯಕ್ರಮ ಒಳಗೊಂಡ 14ನೇ ವರ್ಷದ ನಮ್ಮನೆ ಹಬ್ಬವನ್ನು ಅವರು ಉದ್ಘಾಟಿಸಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊAಡರು. `ಜಗತ್ತಿನ ಮೂರೇ ಮೂರು ಸರ್ವಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ಮಾತನಾಡಿದಂತೆ ಬರೆಯುವ ಲಿಪಿಯುಳ್ಳ, ಬರೆದಿದ್ದನ್ನು ಯಥಾವತ್ತಾಗಿ ಮಾತನಾಡುವ ಶಕ್ತಿಯುಳ್ಳ, ಸಂಧಿ, ಸಮಾಸ, ವ್ಯಾಕರಣ, ಅಲ್ಪಪ್ರಾಣ, ಮಹಾಪ್ರಾಣ ಇರುವ ಶ್ರೀಮಂತ ಭಾಷೆ ಅದುವೇ ಕನ್ನಡ. ಹೀಗಿರುವಾಗ ಇಂಗ್ಲಿಷ ಹಾವಳಿಯಲ್ಲಿ ನಮ್ಮ ಮಾತಿನಲ್ಲಿ ಕನ್ನಡ ಶಬ್ದಗಳನ್ನು ಹುಡುಕಾಡುವ ಸಂದರ್ಭ ಬರಬಾರದು’ ಎಂದವರು ಹೇಳಿದರು.
ಪ್ರಸಿದ್ಧ ರಂಗಭೂಮಿ ಕಲಾವಿದೆ, ಗಾಯಕಿ ಬಿ ಜಯಶ್ರೀ ಮಾತನಾಡಿ `ಹಳ್ಳಿಗರಿಗೆ ಟಿವಿನೇ ಬೇಕು ಅಂತಿಲ್ಲ. ಇಂತಹ ಸಂಸ್ಕೃತಿಯುಕ್ತ ಕಾರ್ಯಕ್ರಮ ಸಂಘಟಿಸಿದರೆ ಮನಃಸ್ಪೂರ್ತಿಯಾಗಿ ಪಾಲ್ಗೊಳ್ಳುತ್ತಾರೆ. ಇದಕ್ಕೆ ಬೆಟ್ಟಕೊಪ್ಪದಲ್ಲಿ ಆಯೋಜಿಸಿರುವ ನಮ್ಮನೆ ಹಬ್ಬವೇ ಉದಾಹರಣೆ. ಹಳ್ಳಿಗರನ್ನೆಲ್ಲ ಒಂದೆಡೆ ಸೇರುವಂತಹ ಇಂಥ ನಮ್ಮನೆ ಹಬ್ಬವನ್ನು ನಮ್ಮೂರಿನಲ್ಲೂ ಮಾಡಬೇಕು ಅನಿಸಿದೆ’ ಎಂದರು. `ತುಳಸಿ ಹೆಗಡೆ ಪ್ರದರ್ಶಿಸಿದ ಯಕ್ಷನೃತ್ಯ ರೂಪಕದಲ್ಲಿ ಮದ್ದಲೆ, ಚಂಡೆ, ಹಾಡುಗಾರಿಕೆ ಜತೆಯಲ್ಲಿ ಅದಕ್ಕಿಂತ ಹೆಚ್ಚಾಗಿ ಸೊಗಸಾದ ಅಭಿನಯ, ಹೆಜ್ಜೆ ಮನಸ್ಸನ್ನು ಹಿಡಿದುಕೊಂಡಿತು’ ಎಂದು ಶ್ಲಾಘಿಸಿದರು. ನಂದು ಕೆಮಿಕಲ್ಸ್ ಸಂಸ್ಥಾಪಕ ರಾಮನಂದನ ಹೆಗಡೆ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹಾಗೂ ಕಿಶೋರ ಪುರಸ್ಕಾರ ಪಡೆದ ತೇಜಸ್ವಿ ಗಾಂವಕರ್ ಮಾತನಾಡಿದರು. ರಾಘವೇಂದ್ರ ಬೆಟ್ಟಕೊಪ್ಪ, ತುಳಸಿ ಹೆಗಡೆ, ರಮೇಶ ಹೆಗಡೆ ಹಳೆಕಾನಗೋಡ, ನಾಗರಾಜ ಜೋಶಿ ಸೋಂದಾ, ಚಿನ್ಮಯ ಕೆರೆಗದ್ದೆ, ಗಾಯತ್ರಿ ರಾಘವೇಂದ್ರ ಹಾಗೂ ನಾರಾಯಣ ಭಾಗ್ವತ ಕಾರ್ಯಕ್ರಮದ ವಿವಿಧ ಜವಾಬ್ದಾರಿ ನಿಭಾಯಿಸಿದರು.
ವೇದಿಕೆಯಲ್ಲಿ ಒಂದೂವರೆ ತಾಸು ಕಾಲ ನಿರಂತರವಾಗಿ ಯಕ್ಷನೃತ್ಯರೂಪಕ ಪ್ರದರ್ಶಿಸಿದವಳು ಯುವ ವಯಸ್ಸಿನಲ್ಲಿಯೇ ಉನ್ನತ ಸಾಧನೆ ಮಾಡಿದ ಪ್ರತಿಭಾವಂತ ಕಲಾವಿದೆ ತುಳಸಿ ಹೆಗಡೆ. ಗೋವಿನ ಮಹತ್ವ ಸಾರುವ ವಂದೇ ಗೋವಿಂದಮ್ ನೃತ್ಯ ರೂಪಕದ ಮೂಲಕ ನೃತ್ಯ ಅಭಿನಯವನ್ನು ಪ್ರಬುದ್ಧವಾಗಿ ತೋರ್ಪಡಿಸಿ ಮನಗೆದ್ದಳು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕರಿಸಿದರು. ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಸಾಹಿತ್ಯದಲ್ಲಿ ರೂಪಕ ಮೂಡಿಬಂತು. ರಮೇಶ ಹೆಗಡೆ ಹಳೆಕಾನಗೋಡರ ಮೂಲ ಕಲ್ಪನೆ, ವಿನಾಯಕ ಹೆಗಡೆ ಕಲಗದ್ದೆ ನೃತ್ಯ ನಿರ್ದೇಶನ, ವಿ. ಉಮಾಕಾಂತ ಭಟ್ಟ ಕೆರೇಕೈ ಗದ್ಯ ಸಾಹಿತ್ಯ, ಡಾ. ಶ್ರೀಪಾದ ಭಟ್ ಹಿನ್ನೆಲೆ ಧ್ವನಿ, ಜಿ.ಎಸ್.ಭಟ್ ತಾಳಾಭ್ಯಾಸ, ಉದಯ ಪೂಜಾರಿ ಧ್ವನಿಗ್ರಹಣ ಒಳಗೊಂಡ ರೂಪಕ ಆಪ್ತವಾಗಿ ಮೂಡಿಬಂತು.ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ ಆಶಯದ ನುಡಿಗಳನ್ನಾಡಿದರು. ಶ್ರೀಧರರ ಕುರಿತು ನಡೆದ ಭಕ್ತಿಸಂಗೀತದಲ್ಲಿ ವಿಶ್ವೇಶ್ವರ ಭಟ್ಟ ಖರ್ವಾ ಗಾಯನ ಭಕ್ತಿಭಾವ ಮೂಡಿಸಿತು. ಗುರುರಾಜ ಆಡುಕಳ ತಬಲಾ, ಅಜಯ ವರ್ಗಾಸರ ಹಾರ್ಮೊನಿಯಂ, ಅನಂತಮೂರ್ತಿ ಹೆಗಡೆ ತಾಳದ ಸಾಥ್ ನೀಡಿದರು.