`ಮಕ್ಕಳ ಆರೋಗ್ಯದ ವಿಷಯದಲ್ಲಿ ಪಾಲಕರು ಹೆಚ್ಚಿನ ಮುತುವರ್ಜಿವಹಿಸಬೇಕು’ ಎಂದು ಸಿದ್ದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಚ್ ನಾಯ್ಕ ಅವರು ಹೇಳಿದ್ದಾರೆ. `ಮಕ್ಕಳ ಮನೋದೈಹಿಕ ಆರೋಗ್ಯ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ’ ಎಂದವರು ಮಾಹಿತಿ ನೀಡಿದ್ದಾರೆ.
ಶನಿವಾರ ಶಿರಸಿಯ ಸ್ಕೋಡ್‌ವೆಸ್, ದೇಸಾಯಿ ಫೌಂಡೇಶನ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರಶಾಂತಿ ಶಿಕ್ಷಣ ಸಂಸ್ಥೆ ಆವಾರದಲ್ಲಿ ಬಾಲ ಆರೋಗ್ಯ ಮೇಳ ನಡೆಯಿತು. ಈ ಮೇಳ ಉದ್ಘಾಟಿಸಿದ ಶಿಕ್ಷಣಾಧಿಕಾರಿ ಎಂ ಎಚ್ ನಾಯ್ಕ ಅವರು `ಬಾಲ್ಯದಲ್ಲಿಯೇ ವಯಕ್ತಿಕ ಆರೋಗ್ಯ, ಪೌಷ್ಠಿಕ ಆಹಾರ, ದೈಹಿಕ ಬೆಳವಣಿಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಪಾಲಕರು ಸಮರ್ಪಕವಾಗಿ ಒದಗಿಸಬೇಕು’ ಎಂದು ಕರೆ ನೀಡಿದರು.
ಸ್ಕೋಡ್ ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ್ ನಾಯ್ಕ ಅವರು ಮಾತನಾಡಿ `ಗ್ರಾಮೀಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸ್ಕೋಡ್ ವೆಸ್ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬಾಲ ಆರೋಗ್ಯ ಮೇಳದಲ್ಲಿ ವಯಕ್ತಿಕ ಶುಚಿತ್ವ, ಮಾನಸಿಕ ಆರೋಗ್ಯಕ್ಕಾಗಿ ವಿವಿಧ ಮನರಂಜನಾ ಕ್ರೀಡಾ ಚಟುವಟಿಕೆಗಳು, ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರದ ಮಹತ್ವ, ವಿಜ್ಞಾನ ವಸ್ತುಪ್ರದರ್ಶನ ಮುಂತಾದ ಚಟುವಟಿಕೆ ನಡೆಯಲಿದೆ’ ಎಂದು ತಿಳಿಸಿದರು.
ಪ್ರಶಾಂತಿ ಪ್ರೌಢಶಾಲೆ ಮುಖ್ಯೋಧ್ಯಾಪಕ ದಿನೇಶ ಶೆಟ್ಟಿ, ದೈಹಿಕ ಶಿಕ್ಷಕ ಎಂ ವಿ ನಾಯ್ಕ, ಸಮನ್ವಯ ಅಧಿಕಾರಿ ಶೋಭಾ ಡಿಸಿ, ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ರಾಘವೇಂದ್ರ ಬೇಡ್ಕಣಿ, ಸಂಸ್ಥೆಯ ಸಿಬ್ಬಂದಿ ಉಮೇಶ ಮರಾಠಿ ಕಾರ್ಯಕ್ರಮದಲ್ಲಿದ್ದರು.